ಹನೂರು : ಸಮೀಪದ ಆರ್.ಎಸ್ ದೊಡ್ಡಿ ಬಳಿಯಿರುವ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಬುಧವಾರ ತಾಲೂಕು ರೈತ ಸಂಘದ ಪದಾಧಿಕಾರಿಗಳು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಶೋಕ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್‌ಖಾನ್ ಮಾತನಾಡಿ, ರೈತ ಸಂಪರ್ಕ ಕೇಂದ್ರಕ್ಕೆ ಮಲೆ ಮಹದೇಶ್ವರಬೆಟ್ಟ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಈ ರಸ್ತೆಯು ಮಣ್ಣಿನ ರಸ್ತೆಯಾಗಿದೆ. ಇದರಿಂದ ಮಳೆಗಾಲದ ವೇಳೆ ಈ ರಸ್ತೆಯು ಕೆಸರು ಗದ್ದೆಯಂತಾಗುತ್ತದೆ. ಕೆಲಸ ಕಾರ್ಯಗಳ ನಿಮಿತ್ತ ಹೋಬಳಿ ವ್ಯಾಪ್ತಿಯ ರೈತರು ಕೇಂದ್ರಕ್ಕೆ ತೆರಳಬೇಕಾದರೆ ಆಸುಪಾಸಿನ ಜಮೀನಿನ ಮೇಲೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ
ಎಂದರು. ಬೈಕ್ ಸವಾರರು ಕೆಸರಿನಲ್ಲಿ ಹರ ಸಾಹಸಪಟ್ಟು ತೆರಳುತ್ತಿದ್ದು, ಈ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆಯುತ್ತಲೇ ಇದೆ. ಜತೆಗೆ ಈ ಕೇಂದ್ರದಿಂದ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳು ಸೇರಿದಂತೆ ಸರ್ಕಾರದಿಂದ ಸಿಗುವ ಸವಲತ್ತುಗಳ ಸಾಮಗ್ರಿಗಳನ್ನು ಗೂಡ್ಸ್ ವಾಹನದಲ್ಲಿ ಕೊಂಡೊಯ್ಯಲು ತುಂಬಾ ತೊಂದರೆ ಪಡಬೇಕಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಮುತುರ್ವಜಿ ವಹಿಸಿ ಸಿಸಿ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಕ್ರಮ ವಹಿಸದಿದ್ದರೆ ಪಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಗತ್ಯ ಕ್ರಮದ ಭರವಸೆ : ಮುಖ್ಯಾಧಿಕಾರಿ ಅಶೋಕ್ ಪ್ರತಿಕ್ರಿಯಿಸಿ, ಈ ಸಂಬಂಧ ಕ್ರಿಯಾಯೋಜನೆ ತಯಾರಿಸಿ 15 ದಿನಗಳೊಳಗೆ ಮೆಟ್ಲಿಂಗ್ ರಸ್ತೆ ನಿರ್ಮಿಸುವುದಾಗಿ ತಿಳಿಸಿದರು. ಆದರೆ ಇದಕ್ಕೊಪ್ಪದ ರೈತರು ಸಿಸಿ ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದರು. ಅಗತ್ಯ ಕ್ರಮವಹಿಸಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.
ಸಂಘದ ಗೌರವಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಪಳನಿಸ್ವಾಮಿ, ಕಾರ್ಯದರ್ಶಿ ಬಸವರಾಜು, ರೈತ ಮುಖಂಡರಾದ ನಾಗರಾಜು ಹಾಗೂ ಮಹದೇವ ಇದ್ದರು.