ತಿ.ನರಸೀಪುರ: ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸ್ಥಳೀಯವಾಗಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ತಾಲೂಕಿನ ಕುಳ್ಳನಕೊಪ್ಪಲು ಗ್ರಾಮದ ಆರೋಹಣ ಸೆಂಟ್ರಲ್ ಸ್ಕೂಲ್‌ಗೆ ಸಿಬಿಎಸ್‌ಸಿ ಮಾನ್ಯತೆ ದೊರಕಿದೆ ಎಂದು ಶಾಲೆಯ ಅಧ್ಯಕ್ಷ ವೈ.ಎಚ್.ಹನುಮಂತೇಗೌಡ ಹೇಳಿದರು.
ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಐದು ವರ್ಷಗಳ ಹಿಂದೆ ಆರಂಭವಾದ ಶಾಲೆಗೆ ಈಗ ಸಿಬಿಎಸ್‌ಸಿ ಮಾನ್ಯತೆ ದೊರಕಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ಕೇಂದ್ರದ ಪಠ್ಯ ಕ್ರಮ ಅಳವಡಿಸಿಕೊಳ್ಳುವ ಮೂಲಕ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಲಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಎಸ್.ಯೋಗೇಂದ್ರ ಮಾತನಾಡಿ, ಶಾಲೆಯು ಹಲವಾರು ವಿಶೇಷತೆಗಳೊಂದಿಗೆ ತನ್ನದೇ ಆದ ಮೈಲಿಗಲ್ಲನ್ನು ತಲುಪಿದೆ. ಇದೀಗ ಶಾಲೆಯಲ್ಲಿ ಮಕ್ಕಳ ಸಂಖ್ಯೆ 500ಕ್ಕೆ ಏರಿದೆ. ಪಾಲಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಶಾಲೆಯಲ್ಲಿ ಸುಸಜ್ಜಿತವಾದ ವಿಜ್ಞಾನ, ಗಣಿತ ಪ್ರಯೋಗಾಲಯ ಇದೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಕಿಡ್ ಕ್ಲಿನಿಕ್ ತೆರೆದು ತರಬೇತಿ ಪಡೆದ ಶುಶ್ರೂಷಕಿಯರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಖಜಾಂಚಿ ಮಾಣಕ್ ಚಂದ್ ಚೌದರಿ, ಪ್ರಾಂಶುಪಾಲೆ ಬಿ.ವಿಮಲಾ ಇತರರು ಇದ್ದರು.