ದಾವಣಗೆರೆ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೆಲ ಪೊಲೀಸರು ವಿನಾಕಾರಣ ದೌರ್ಜನ್ಯ ನಡೆಸಿದ್ದಲ್ಲದೆ, ಲಂಚ ಪಡೆದು ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಶಾಸಕ ಶಿವಗಂಗಾ ಬಸವರಾಜ್ ಶನಿವಾರ ಪ್ರತಿಭಟನೆ ನಡೆಸಿದ್ದರ ಬೆನ್ನಲ್ಲೇ ಆರೋಪಿತ ಪೊಲೀಸರ ವಿರುದ್ಧದ ತನಿಖೆಗೆ ಡಾ. ಕೆ.ಅರುಣ್ ಆದೇಶಿಸಿದ್ದಾರೆ.
‘ಶಾಸಕರು ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಎಎಸ್ಪಿ ರಾಮಗೊಂಡ ಬಸರಗಿ ಅವರಿಗೆ ತನಿಖೆಯ ಹೊಣೆ ವಹಿಸಲಾಗಿದೆ. ತನಿಖೆ ಮುಗಿಯುವವರೆಗೂ ಆರೋಪಿತ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆ ನೀಡಲಾಗಿದೆ. 4-5 ದಿನದಲ್ಲಿ ತನಿಖೆ ವರದಿ ಬರಲಿದೆ’ ಎಂದು ಎಸ್ಪಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಅಪ್ರಾಪ್ತ ಬಾಲಕರಿಬ್ಬರಿಂದ ಅಪ್ರಾಪ್ತ ಬಾಲಕನ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳದ ಆರೋಪದಡಿ ‘ಪೊಲೀಸರು ಉದ್ದೇಶಪೂರ್ವಕವಾಗಿ ಕೇಸ್ ದಾಖಲು ಮಾಡಿದ್ದಾರೆ’ ಎಂಬುದಾಗಿ ಶಾಸಕರು ದೂರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ‘ಪೋಕ್ಸೋ ಪ್ರಕರಣದಡಿ ಈಗಾಗಲೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಬಾಲಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ತನಿಖೆ ಬಳಿಕ ಸತ್ಯಾಂಶ ತಿಳಿದುಬರಲಿದೆ’ ಎಂದರು.
ಶನಿವಾರ ತಡರಾತ್ರಿವರೆಗೆ ಚನ್ನಗಿರಿ ಠಾಣೆ ಬಳಿ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ್ದ ಶಾಸಕ ಶಿವಗಂಗಾ ಬಸವರಾಜ್ ಅಲ್ಲಿನ ಪೊಲೀಸರು ಸರ್ವಾಧಿಕಾರಿ ನಡೆ ತೋರುತ್ತಿರುವುದಾಗಿ ಆಪಾದನೆ ಮಾಡಿದ್ದರು.
‘ಒಂದು ತಿಂಗಳವಧಿಯಲ್ಲಿ 25ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಹಣ ನೀಡಿದವರ ಪರವಾಗಿ ಕೆಲಸ ಮಾಡಲಾಗುತ್ತಿದೆ. ನನ್ನ ಮಾತನ್ನೂ ಕೇಳುತ್ತಿಲ್ಲ. ಮಕ್ಕಳ ಮೇಲೂ ಪ್ರಕರಣ ದಾಖಲಿಸಿದರೆ ಅವರ ಭವಿಷ್ಯ ಹಾಳಾಗಲಿದೆ. ಅವರನ್ನು ಬಿಟ್ಟು ಕಳಿಸಿ ಎಂದು ಸೂಚಿಸಿದರೂ ಪೊಲೀಸರು ಉದ್ದೇಶಪೂರ್ವಕವಾಗಿಯೇ ದೂರು ದಾಖಲು ಮಾಡಿದ್ದಾರೆ’ ಎಂದು ಶಾಸಕರು ಆರೋಪಿಸಿದ್ದರು. ಶಾಸಕರು ಮತ್ತು ಪೊಲೀಸರ ನಡುವಿನ ಸಂಘರ್ಷ ವಿಧಾನಸಭೆ ಮೊಗಸಾಲೆಯಲ್ಲೂ ಚರ್ಚೆಗೆ ಬರುವ ಲಕ್ಷಣಗಳಿವೆ.
--