ಚಿತ್ರದುರ್ಗ: ನನ್ನ ಮೇಲಿನ ವೈಯಕ್ತಿಕ ಕಾರಣದಿಂದಾಗಿ ಕೆಲವರು ಆರೋಪ ಮಾಡುತ್ತಿದ್ದಾರೆ. ಅವೆಲ್ಲವೂ ಸತ್ಯಕ್ಕೆ ದೂರ ಎಂದು ಹಿಂದು ಮಹಾಗಣಪತಿ ಉತ್ಸವ ಸಮಿತಿಯ ಮಾರ್ಗದರ್ಶಕ ಬದರಿನಾಥ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದು ಕಾರ್ಯಕರ್ತರಿಗೆ ಹಲ್ಲೆ ನಡೆಸಲು ಸೂಚಿಸಿದ್ದೇನೆಂಬ ಆಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಅದೂ ಸುಳ್ಳು. ವೈಯಕ್ತಿಕ ದ್ವೇಷ ಮುಂದಿಟ್ಟುಕೊಂಡು ಆರೋಪಿಸುತ್ತಿದ್ದಾರೆ. ನಾನೇನೆಂಬುದು ಇಡೀ ಹಿಂದು ಸಮಾಜಕ್ಕೆ ತಿಳಿದಿದೆ ಎಂದರು.
ಹಿಂದು ಸಮಾಜ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ. ಸಮಿತಿಯಿಂದ ಹೊರನಡೆದು ಏಕತಾ ಗಣಪತಿ ಪ್ರತಿಷ್ಠಾಪನೆಗೆ ಮುಂದಾದವರು ಈಗ ಆರೋಪಿಸುತ್ತಿದ್ದಾರೆ. ಪ್ರತಿ ವರ್ಷ ಸಂಗ್ರಹವಾಗಿದ್ದು, ಖರ್ಚಾಗಿದ್ದನ್ನು ವಿಸರ್ಜನೆ ನಂತರ ಸಮಿತಿಗೆ ತಿಳಿಸಲಾಗುತ್ತಿದೆ. ಸಂಘಟನೆ ಕೇಳಿದಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ಹೇಳಿದರು.
ವೈಯಕ್ತಿಕ ವ್ಯವಹಾರಕ್ಕೂ ಸಮಿತಿಗೂ ಯಾವ ಸಂಬಂಧವಿಲ್ಲ. ಸಮಿತಿ ಪಾರದರ್ಶಕವಾಗಿದೆ. ನನ್ನ ವಿರುದ್ಧದ ಆರೋಪಗಳ ಕುರಿತು ಸಮಗ್ರ ತನಿಖೆಯಾಗಲಿ. ಕಾನೂನಾತ್ಮಕವಾಗಿ ಎದುರಿಸಲು ಸಿದ್ಧನಿದ್ದೇನೆ. ಸತ್ಯವಲ್ಲವೆಂದರೆ, ಆರೋಪ ಮಾಡಿದವರು ಸಾರ್ವಜನಿಕವಾಗಿ ಬಹಿರಂಗ ಕ್ಷಮೆ ಕೇಳಬೇಕು. ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ತಿಳಿಸಿದರು.
ನಾನಾಗಿಯೇ ಮಾರ್ಗದರ್ಶಕ ಆಗಿಲ್ಲ. ಅದು ಸಮಿತಿಯ ತೀರ್ಮಾನ. ಅಧ್ಯಕ್ಷರು, ಪದಾಧಿಕಾರಿಗಳು ಯಾರಾಗಬೇಕು ಎಂಬುದನ್ನು ಸಮಿತಿಯಲ್ಲೇ ನಿರ್ಧರಿಸಲಾಗುವುದು. ಸಂಘಟನೆಯಲ್ಲಿ ಬಿರುಕು ಮೂಡಿಲ್ಲ ಎಂದರು.
ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್, ವಕೀಲ ವಿಶ್ವನಾಥಯ್ಯ ಇದ್ದರು.