ಜಿಲ್ಲೆ

ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ

ಯಾದಗಿರಿ: ಗುರುಮಠಕಲ್ ಠಾಣೆ ಸಿಪಿಐ ಪೋಸ್ಟಿಂಗ್‌ಗೆ ಜಿಲ್ಲೆಯ ಕೆಲ ನಾಯಕರು ೪೦ ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂಬ ಶಾಸಕ ಶರಣಗೌಡ ಕಂದಕೂರ ಆರೋಪದಲ್ಲಿ ಹುರುಳಿಲ್ಲ ಎಂದಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್ ಅನಪುರ ಮತ್ತು ಮಾಜಿ ಸಚಿವ ಬಾಬುರಾವ ಚಿಂಚನಸೂರ್, ಆರೋಪ ಸಾಬೀತುಪಡಿಸಿದರೆ ನಾವು ರಾಜಕೀಯ ನಿವೃತ್ತಿ ಪಡೆಯುತ್ತೇವೆ. ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸಬೇಕು ಎಂದು ಸವಾಲು ಹಾಕಿದ್ದಾರೆ.

ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು. ಸುಳ್ಳು ಆರೋಪ ಮಾಡುವುದು ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ವಿನಾಕಾರಣ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಆರೋಪ ಮಾಡಿದ್ದು, ಏನು ಸಾಕ್ಷಿಗಳಿವೆ? ಖರ್ಗೆ ಕುಟುಂಬದ ಬಗ್ಗೆ ಮಾತನಾಡಿದರೆ ದೊಡ್ಡವರಾಗುತ್ತೇವೆ ಎಂದು ಭಾವಿಸಿ ಇಲ್ಲಸಲ್ಲದ ಮಾತುಗಳನ್ನಾಡಬಾರದು ಎಂದು ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಒಬ್ಬರು ಮಂತ್ರಿ, ಇನ್ನೊಬ್ಬ ಸಂಸದರಿದ್ದಾರೆ. ಅವರಿಬ್ಬರಿಗೂ ಯಾದಗಿರಿ ಜಿಲ್ಲೆಯ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವ ಮತ್ತು ತಪ್ಪು ನಡೆದರೆ ಸರಿಯಲ್ಲ ಎಂದು ಹೇಳುವ ಹಕ್ಕಿದೆ ಎಂಬುದನ್ನು ಕಂದಕೂರ ಅರಿಯಬೇಕು ಎಂದರು.

ಗುರುಮಠಕಲ್ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಹೊಸ ಹೊಸ ಯೋಜನೆಗಳನ್ನು ತರಲು ಪ್ರಯತ್ನಿಸಿದರೆ ಶಾಸಕರ ಘನತೆ ಹೆಚ್ಚುತ್ತದೆ. ಅದನ್ನು ಬಿಟ್ಟು ಸಿಪಿಐ ತಮ್ಮ ಮಾತು ಕೇಳುತ್ತಿಲ್ಲ ಎಂದು ಸದನದಲ್ಲಿ ಹೇಳಿದ್ದು ಎಷ್ಟರಮಟ್ಟಿಗೆ ಸರಿ ಎಂದು ಕಂದಕೂರ ವಿರುದ್ಧ ಕಿಡಿಕಾರಿದರು.
ಆರು ವರ್ಷಗಳಲ್ಲಿ ಗುರುಮಠಕಲ್‌ಮತಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳಲ್ಲಿ ಗುತ್ತಿಗೆದಾರರಿಂದ ಎಷ್ಟು ಕಮಿಷನ್ ಪಡೆದಿದ್ದೀರಿ ಎಂಬುದು ನಮಗೆ ಗೊತ್ತಿದೆ. ಅಲ್ಲದೆ ಹಲವಾರು ಕಾಮಗಾರಿಯಾಗಿವೆ ಎಂದು ಜನರೇ ಸಾರ್ವಜನಿಕವಾಗಿ ಮಾತನಾಡುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಿದರೆ ಉತ್ತಮ.


ಸಂಸದ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಗುರುಮಠಕಲ್ ಮತಕ್ಷೇತ್ರ ಸಂಬAಧಪಡುತ್ತದೆ. ಈ ಕ್ಷೇತ್ರದೊಂದಿಗೆ ಖರ್ಗೆ ಕುಟುಂಬ ೪೦ ವರ್ಷದ ಒಡನಾಟ ಹೊಂದಿದೆ. ಹೀಗಾಗಿ ಸ್ಥಳೀಯರ ಕಷ್ಟ-ಸುಖಗಳಿಗೆ ಸ್ಪಂಧಿಸುತ್ತಾರೆ. ಇದನ್ನೇ ತಪ್ಪು ಎಂಬAತೆ ಮಾತನಾಡುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದ ಚಿಂಚನಸೂರ್ ಮತ್ತು ಅನಪುರ, ನಿಮ್ಮ ವೈಫಲ್ಯಗಳ ವಿರುದ್ಧ ಹೋರಾಟಕ್ಕೆ ನಾವು ಸಿದ್ಧ ಎಂದು ಗುಡುಗಿದರು.
ಚಿದಾನಂದ ಕಾಳೆಬೆಳಗುಂದಿ, ಕೃಷ್ಣ ಚಪೇಟ್ಲಾ, ನಿರಂಜನರೆಡ್ಡಿ ಶೆಟ್ಟಿಹಳ್ಳಿ, ಶ್ಯಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಈಟಿ ಇತರರಿದ್ದರು.