ಮಳವಳ್ಳಿ: ಆರೋಗ್ಯವಂತನಾದ ಪ್ರತಿ ವ್ಯಕ್ತಿಯೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಜೀವದಾನ ಮಾಡಬೇಕು ಎಂದು ಡಿವೈಎಸ್ ಪಿ.ನವೀನ್‌ಕುಮಾರ್ ಸಲಹೆ ನೀಡಿದರು.
ಪಟ್ಟಣದಲ್ಲಿ ಆ.15 ರಂದು ತಾಲೂಕು ಯುವಕ ಮಿತ್ರರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ 2023 ಯೂನಿಟ್ ರಕ್ತ ಸಂಗ್ರಹ ದಾಖಲೆ ಶಿಬಿರದ ಪ್ರಚಾರ ರಥಕ್ಕೆ ಗುರುವಾರ ಪಟ್ಟಣದ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕೃತಕವಾಗಿ ಸೃಷ್ಟಿಸಲಾಗದ ರಕ್ತವು ಮನುಷ್ಯನ ದೇಹದಲ್ಲಿ ಮಾತ್ರ ಉತ್ಪಾದನೆಯಾಗುತ್ತದೆ. ರಕ್ತದಾನ ಮಾಡುವುದರಿಂದ ಆರೋಗ್ಯದ ಸಮತೋಲನ ಕಾಯ್ದುಕೊಳ್ಳಬಹುದು ಎಂದು ವೈದ್ಯಕೀಯ ಕ್ಷೇತ್ರವೂ ಸ್ಪಷ್ಟಪಡಿಸಿದೆ. ಆದ್ದರಿಂದ, ಎಲ್ಲರೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನು ಉಳಿಸಬೇಕು ಎಂದರು.
ಇದಕ್ಕೂ ಮೊದಲು ಗಂಗಧರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಆ.15ರಂದು 76ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಯೋಧರ ಸ್ಮರಣಾರ್ಥ ಪಟ್ಟಣದ ರೋಟರಿ ಶಾಲೆ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಿದ್ದು, ಈ ಸಂಬಂಧವಾಗಿ ಪ್ರಚಾರ ರಥವೂ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಲಿದೆ. ಎಲ್ಲರೂ ಹೆಚ್ಚ ಸಂಖ್ಯೆಯಲ್ಲಿ ಜಾಗೃತರಾಗಿ ಅಂದಿನ ಶಿಬಿರದಲ್ಲಿ ಆಗಮಿಸಿ ದಾಖಲೆ ಮುಟ್ಟಲು ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪರಸಭೆ ಸದಸ್ಯರಾದ ಟಿ.ನಂದಕುಮಾರ್, ಸಿದ್ದರಾಜು, ಜಿಪಂ ಮಜಿ ಸದಸ್ಯೆ ಸುಷ್ಮಾರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ದೊಡ್ಡಯ್ಯ, ದಯಾಶಂಕರ್, ಮುಖಂಡರಾದ ಎಂ.ಎನ್.ಮಹೇಶ್‌ಕುಮಾರ್, ಟಿ.ಎಂ.ಪ್ರಕಾಶ್, ಎವಿಟಿ ಕುಮಾರ್, ಮಿಲ್ಟ್ರೀ ಸುರೇಶ್, ಪೊಲೀಸ್ ಪ್ರಭು, ಮೆಹಬೂಬ್ ಪಾಷ, ಸುಬ್ರಮಣ್ಯಸ್ವಾಮಿ, ಶಿವರಾಜು ಇತರರಿದ್ದರು.