ಚಿಕ್ಕಬಳ್ಳಾಪುರ: ಅಪೌಷ್ಟಿಕತೆಯ ಸಮಸ್ಯೆಯು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ತೊಡಕಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಮತ್ತು ಮಕ್ಕಳಲ್ಲಿ ಬಾಧಿಸುತ್ತಿರುವ ಅಪೌಷ್ಟಿಕತೆ, ರಕ್ತಹೀನತೆ ತೊಡೆದು ಹಾಕಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಸಮಸ್ಯೆ ದೂರವಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸಮಸ್ಯಾತ್ಮಕ ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳನ್ನು ಗುರುತಿಸಿ, ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗುವಂತಾಗಲು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಸಮನ್ವಯದಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ನಡೆಸಬೇಕು. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ ಎಂದ ಡಿಸಿ, ರಿಯಾಯಿತಿ ಮತ್ತು ಉಚಿತ ಆರೋಗ್ಯ ಸೇವೆ ನೀಡಲು ಸಹಕಾರಿಯಾಗಿರುವ ಆಯುಷ್ಮಾನ್ ಭಾರತ್ ಯೋಜನೆ ಕುರಿತು ಹಲವರಿಗೆ ಗೊತ್ತಿಲ್ಲ. ಇದನ್ನರಿತು ಅರ್ಹರಿಗೆ ಆರೋಗ್ಯ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ನಗರ, ಪಟ್ಟಣ ಪ್ರದೇಶಗಳ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಜನರಿಗೆ ವಿಶೇಷ ಆರೋಗ್ಯ ಸೇವೆ ಒದಗಿಸಲು ಪ್ರತಿಯೊಬ್ಬರು ಅಗತ್ಯ ಸಹಕಾರ ನೀಡಬೇಕೆಂದು ಮನವಿ ಮಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಇಂದಿರಾ ಆರ್.ಕಬಾಡೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುತ್ತಿದ್ದು ಆವರಣದಲ್ಲಿ ಆಕರ್ಷಕ ಉದ್ಯಾನ ನಿರ್ಮಿಸಲಾಗುತ್ತಿದೆ. ಗುಣಮಟ್ಟದ ಸೇವೆ ನೀಡಲು ಅಗತ್ಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ ಮಂಜುಳಾ, ಜಿಪಂ ಯೋಜನಾ ನಿರ್ದೇಶಕ ಕೆ.ಗಿರಿಜಾಶಂಕರ್ ಮತ್ತಿತರರು ಇದ್ದರು.
ಆರೋಗ್ಯ ಕೇಂದ್ರ ಪರಿಶೀಲನೆ: ತಾಲೂಕಿನ ಪೆರೇಸಂದ್ರ ಮತ್ತು ಮಂಡಿಕಲ್ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಭೇಟಿ ನೀಡಿ ಪರಿಶೀಲಿಸಿದರು. ಸಿಬ್ಬಂದಿ ಹಾಜರಾತಿ, ದಾಖಲಾತಿ ನಿರ್ವಹಣೆ, ಅಗತ್ಯ ಔಷಧ ದಾಸ್ತಾನು ಬಗ್ಗೆ ಮಾಹಿತಿ ಪಡೆದರು, ವಾರ್ಡ್‌ಗಳಿಗೆ ತೆರಳಿ ರೋಗಿಗಳ ಸಮಸ್ಯೆ ಆಲಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವ ಸಾರ್ವಜನಿಕರು ಬೇಸರದಿಂದ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು. ಹಾಸಿಗೆ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ, ಸ್ವಚ್ಛತೆ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.