ಕಳಸ: ಒಂದು ಆರೋಗ್ಯವಂತ ಸಮಾಜದ ಮೂಲಾಧಾರವೇ ತಾಯಿ ಮತ್ತು ಮಗು. ಗರ್ಭಿಣಿಯರ ಆರೈಕೆ ಮತ್ತು ಮಕ್ಕಳ ಆರೋಗ್ಯ ಕುಟುಂಬಕ್ಕೆ ಮಾತ್ರವಲ್ಲ ರಾಷ್ಟ್ರದ ಭವಿಷ್ಯಕ್ಕೆ ಮಹತ್ವದ್ದಾಗಿದೆ ಎಂದು ಡಾ. ವಿಕ್ರಮ್ ಪ್ರಭು ಹೇಳಿದರು.
ಕಳಸ ರೋಟರಿ ಕ್ಲಬ್ ಮತ್ತು ಇನ್ನರ್‌ವೀಲ್ ಕ್ಲಬ್‌ನಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಗರ್ಭಿಣಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗರ್ಭಾವಸ್ಥೆ ಒಂದು ಸಂತೋಷದ ಕಾಲವಾದರೂ ಎಚ್ಚರಿಕೆಯ ಅಗತ್ಯವಿರುವ ಸಮಯವೂ ಹೌದು. ಪೌಷ್ಟಿಕ ಆಹಾರ ತಾಯಿಯ ಆರೋಗ್ಯವನ್ನು ಕಾಪಾಡುವುದರ ಜತೆಗೆ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್.ಜಿ.ಮಹೇಂದ್ರ ಮಾತನಾಡಿ, ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ಕಾಪಾಡುವುದು ಕೇವಲ ವೈದ್ಯರ ಜವಾಬ್ದಾರಿಯಲ್ಲ. ಇದು ನಮ್ಮೆಲ್ಲರ ಕರ್ತವ್ಯ. ಸಮುದಾಯವಾಗಿ ನಾವು ಗರ್ಭಿಣಿಯರಿಗೆ ಬೆಂಬಲ ನೀಡಬೇಕು. ಆರೋಗ್ಯ ಜಾಗೃತಿಯನ್ನು ಮೂಡಿಸಬೇಕು ಮತ್ತು ಮಗುವೇ ನಾಳಿನ ಆರೋಗ್ಯವಂತ ರಾಷ್ಟ್ರದ ಆಧಾರ ಎಂದು ಹೇಳಿದರು.
18 ಗರ್ಭಿಣಿಯರಿಗೆ ಪ್ರೋಟೀನ್ ಕಿಟ್ ನೀಡಲಾಯಿತು. ರೋಟರಿ ಕ್ಲಬ್ ಕಾರ್ಯದರ್ಶಿ ಎನ್.ವಿ.ವಿಶಾಲ್, ಸದಸ್ಯರಾದ ಪಿ.ಎ.ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಪಣೀಶ್, ಸತೀಶ್, ಸಂದೀಪ್, ಇನ್ನರ್‌ವೀಲ್ ಕ್ಲಬ್‌ನ ಶ್ರೀವಾಣಿ ಸುಗಮ್, ಸ್ಮಿತಾ ಮಹೇಂದ್ರ, ಶ್ರುತಿ ಪಣೀಶ್ ಇತರರಿದ್ದರು.