ಜಿಲ್ಲೆ

ಆರೋಗ್ಯದೆಡೆ ಉದಾಸೀನ ಸಲ್ಲದು

ಚಿತ್ರದುರ್ಗ: ಕುಟುಂಬದೆಡೆ ಕಾಳಜಿ ವಹಿಸುವ ಮಹಿಳೆಯರು, ತಮ್ಮ ಆರೋಗ್ಯದೆಡೆ ಗಮನ ಹರಿಸದೆ ಉದಾಸೀನತೆ ತೋರುವುದು ಸರಿಯಲ್ಲ ಎಂದು ಚಿತ್ರದುರ್ಗ ಮಹಿಳಾ ಸೇವಾ ಸಮಾಜದ ಉಪಾಧ್ಯಕ್ಷೆ ಮೋಕ್ಷಾ ರುದ್ರಸ್ವಾಮಿ ಹೇಳಿದರು.
ನಗರದ ವೀರಶೈವ ಸಮಾಜ, ಇನ್ನರ್‌ವ್ಹೀಲ್ ಕ್ಲಬ್ ಹಾಗೂ ಬಸವೇಶ್ವರ ಆಸ್ಪತ್ರೆ ಆಶ್ರಯದಲ್ಲಿ ಗುರುವಾರ ಮಹಿಳಾ ಸೇವಾ ಸಮಾಜದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಾತನಾಡಿದರು.
40 ವರ್ಷ ವಯಸ್ಸು ಮೀರಿದ ಪ್ರತಿಯೊಬ್ಬರೂ ಆರೋಗ್ಯದೆಡೆ ವಿಶೇಷ ನಿಗಾ ವಹಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷೃ ಸಲ್ಲದು. ಕಾಲ, ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಆರೋಗ್ಯವೇ ಮಹಾಭಾಗ್ಯವೆಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಹಣ ಗಳಿಸಬಹುದು. ಆದರೆ, ಒಮ್ಮೆ ಆರೋಗ್ಯವನ್ನು ಕಳೆದುಕೊಂಡರೆ ಮತ್ತೆ ಪಡೆಯುವುದು ಕಷ್ಟ. ಹಣ ಗಳಿಕೆಗಿಂತ ಆರೋಗ್ಯದೆಡೆ ಹೆಚ್ಚಿನ ಗಮನ ನೀಡಬೇಕಿದೆ. ವೈದ್ಯರ ಮಾರ್ಗದರ್ಶನದಲ್ಲಿ ಔಷಧ ಸೇವಿಸಬೇಕು ಎಂದು ಹೇಳಿದರು.
ವೀರಶೈವ ಸಮಾಜದ ಉಪಾಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿ, ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಬಸವೇಶ್ವರ ಆಸ್ಪತ್ರೆ ಡೀನ್ ಡಾ.ಪ್ರಶಾಂತ್ ಮಾತನಾಡಿ, ಆಸ್ಪತ್ರೆಯಿಂದ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಡಾ.ಸುಜಯ್, ವೀರಶೈವ ಸಮಾಜದ ಕಾರ‌್ಯದರ್ಶಿ ವೀರೇಂದ್ರಕುಮಾರ್, ಇನ್ನರ್‌ವ್ಹೀಲ್ ಕ್ಲಬ್ ಜಂಟಿ ಕಾರ‌್ಯದರ್ಶಿ ವೀಣಾ ಜಯರಾಂ, ಮಹಿಳಾ ಸೇವಾ ಸಮಾಜದ ಕಾರ‌್ಯದರ್ಶಿ ಲತಾ ಉಮೇಶ್, ಶೈಲಜಾರೆಡ್ಡಿ ಮತ್ತಿತರರು ಇದ್ದರು. ಶೈಲಾ ವಿಶ್ವನಾಥ್ ಪ್ರಾರ್ಥಿಸಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಯಿತು.