ಜಿಲ್ಲೆ

ಆರೋಗ್ಯದ ಕಡೆ ಪ್ರಥಮ ಆದ್ಯತೆ ನೀಡುವಂತೆ ಸಲಹೆ

ಹಾಸನ: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಆರೋಗ್ಯವಂತರಾಗಿ ಜಿವಿಸುವಂತೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನೀತ್ ಅವರು ಸಾರ್ವಜನಿಕರಿಗೆ ತಿಳಿಸಿದರು.

ತಾಲ್ಲೂಕಿನ ಅಟ್ಟಾವರ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನರೇಗಾ ಕೂಲಿ ಕಾರ್ಮಿಕರಿಗೆ ಸೋಮವಾರ ಆಯೋಜಿಸಿದ್ದ ಗ್ರಾಮ ಆರೋಗ್ಯ ಅಭಿಯಾನ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಮಧುಮೇಹ, ರಕ್ತದೊತ್ತಡ, ರಕ್ತ ಹೀನತೆಗೆ ಸಂಬಂಧಿಸಿದಂತೆ ಉಚಿತ ಆರೋಗ್ಯ ತಪಾಸಣೆ ಮಾಡುತ್ತಿದ್ದು ಪ್ರತಿಯೊಬ್ಬರೂ ಭಾಗವಹಿಸಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ದಿನ ನಿತ್ಯ ಯೋಗ, ವ್ಯಾಯಾಮ ಮಾಡುವ ಮೂಲಕ ಉತ್ತಮವಾಗಿ ಆರೋಗ್ಯ ಕಾಪಾಡಿಕೊಳ್ಳಬೇಕು. ತಾವು ವಾಸ ಮಾಡುವ ಸ್ಥಳದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಆಗ ಯಾವುದೇ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಡಾ.ಅಶೋಕ್ ಮಾತನಾಡಿ, ಗ್ರಾಮೀಣ ಭಾಗದ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸರ್ಕಾರದಿಂದ ಆರೋಗ್ಯದ ಬಗ್ಗೆ ಇರುವಂತಹ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಅಟ್ಟಾವರ ಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಘವ್ ಮಾತನಾಡಿ, ಪೌಷ್ಠಿಕಯುಕ್ತ ಆಹಾರ ಸೇವನೆ ಮಾಡುವ ಮೂಲಕ ಉತ್ತಮ ಆಹಾರ ಪದ್ಧತಿ ರೂಢಿಸಿಕೊಂಡು ಆರೋಗ್ಯದ ಸಮಸ್ಯೆಯಿಂದ ಪಾರಾಗಬಹುದು ಎಂದರು.

ಜಿಲ್ಲಾ ಆರೋಗ್ಯ ಕಾರ್ಯಕ್ರಮ ಸಂಯೋಕ ಮಂಜು ಭಾರ್ಗವ್ ಮಾತನಾಡಿ, ಯಾವುದೇ ರೀತಿಯ ರೋಗ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಬಗ್ಗೆ ನಿಮ್ಮ ಸುತ್ತ ಮುತ್ತಲಿನ ಜನರಿಗೆ ತಿಳಿಸುವಂತೆ ಜನರಿಗೆ ಹೇಳಿದರು.

ಇದೇ ವೇಳೆ ಹಾಸನ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಅಟ್ಟಾವರ ಹೊಸಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಚಂದ್ರಪ್ರಭ, ಯಶೋದಮ್ಮ, ದೊರೆಸ್ವಾಮಿ, ಪಿಡಿಒ ಅಭಿಲಾಷ್, ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಂಯೋಜಕ ರಾಜೇಶ್, ತಾಲ್ಲೂಕು ಆರೋಗ್ಯ ಕಾರ್ಯಕ್ರಮ ಸಂಯೋಜಕ ಯಶವಂತ್ ಹಾಗೂ ಮತ್ತಿತರರು ಹಾಜರಿದ್ದರು.