ಜಿಲ್ಲೆ

ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅತ್ಯಗತ್ಯ



ಮಡಿಕೇರಿ : ಪ್ರತಿಯೊಬ್ಬರೂ ಆರೋಗ್ಯಯುತರಾಗಿರಲು ಪೌಷ್ಟಿಕ ಆಹಾರ ಅತ್ಯಗತ್ಯ. ಇದರಿಂದ ತಾಯಿ ಮತ್ತು ಶಿಶು ಮರಣ ತಪ್ಪಿಸಲು ಸಾಧ್ಯ ಎಂದು ಮಡಿಕೇರಿ ಟಿಎಚ್‌ಒ ಚೇತನ್ ಹೇಳಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣಾ ಅಭಿಯಾನ ಯೋಜನೆಯಡಿ ಬುಧವಾರ ಬಾಲಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಆರೋಗ್ಯಯುತವಾಗಿರಲು ಪೌಷ್ಟಿಕ ಆಹಾರ ಸೇವಿಸಬೇಕು. 6 ತಿಂಗಳವರೆಗೆ ಮಕ್ಕಳಿಗೆ ತಾಯಿಯ ಹಾಲು ಕುಡಿಸಬೇಕು. ವೈದ್ಯರ ಸೂಚನೆಯಂತೆ ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಮಗುವಿನ ತೂಕ ಕಡಿಮೆ ಇದ್ದಲ್ಲಿ ತೂಕ ಹೆಚ್ಚಿಸಲು ಪೌಷ್ಟಿಕ ಆಹಾರ ನೀಡಬೇಕೆಂದರು.


ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವೈದ್ಯರ ಸಲಹೆಯಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸರಿಯಾದ ಸಮಯಕ್ಕೆ ಲಸಿಕೆ ಕೊಡಿಸಬೇಕು. ಸೊಪ್ಪು, ತರಕಾರಿ ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಮೊದಲೇ ತಯಾರಿಸಿರುವ ಆಹಾರವನ್ನು ಮಕ್ಕಳಿಗೆ ನೀಡಬಾರದು. ಮಕ್ಕಳಿಗೆ ಬೆಳವಣಿಗೆ ಕುಂಠಿತವಾಗದಂತೆ ಎಚ್ಚರ ವಹಿಸಬೇಕು. ಮಗುವಿನ ಎತ್ತರಕ್ಕೆ ಸರಿಯಾಗಿ ತೂಕ ಇರಬೇಕು. ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ಪೌಷ್ಟಿಕತೆ ಹೆಚ್ಚಾಗಿ ಇರಬೇಕೆಂದರು.


ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಲ್ಲಿ ರಕ್ತಹೀನತೆ ಉಂಟಾಗದಂತೆ ಎಚ್ಚರ ವಹಿಸಬೇಕು. ಎಲ್ಲ ರೀತಿಯ ತರಕಾರಿ ಮತ್ತು ಸೊಪ್ಪನ್ನು ಸೇವಿಸಬೇಕು. ಇದರಿಂದ ಖನಿಜಾಂಶ ದೊರೆಯಲಿದೆ. ರಕ್ತಹೀನತೆ ತಡೆಯಲು ಸೊಪ್ಪು, ತರಕಾರಿ ಸೇವಿಸಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮ ಸರಿಯಾಗಿ ಪಾಲಿಸಬೇಕು. ಮಕ್ಕಳ ನಡುವಿನ ಅಂತರ ಕನಿಷ್ಠ 3 ವರ್ಷ ಇರಬೇಕು. ಇದರಿಂದ ಮಗುವಿನ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎನ್.ಮಂಜುನಾಥ್, ಆರೋಗ್ಯ ಶಿಕ್ಷಣಾಧಿಕಾರಿ ಪಾಲಾಕ್ಷ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾದೇವಿ, ಸಿಡಿಪಿಒ ಸವಿತಾ ಇದ್ದರು. ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಭನ್ವರ್ ಸಿಂಗ್ ಮೀನಾ ಪೋಷಣ್ ಅಭಿಯಾನ ಜಾಥಕ್ಕೆ ಚಾಲನೆ ನೀಡಿದರು.