ಜಿಲ್ಲೆ

ಆರೋಗ್ಯಕ್ಕಾಗಿ ಯೋಗ ಶಿಬಿರ


ಬೇಲೂರು: ತಾಲೂಕಿನ ಅರೇಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ 17 ದಿನಗಳ ಕಾಲ ಆಯೋಜಿಸಿದ್ದ ಆರೋಗ್ಯಕ್ಕಾಗಿ ಯೋಗ ಶಿಬಿರದ ಗುರುವಂದನಾ ಕಾರ್ಯಕ್ರಮ ನಡೆಯಿತು.

ಗುರುವಂದನಾ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಯೋಗಗುರು ಚೇತನ್ ಗರೂಜಿಯನ್ನು ಸನ್ಮಾನಿಸಿ ಮಾತನಾಡಿದ ಶಿಬಿರಾರ್ಥಿ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತುಳಸಿದಾಸ್, 17 ದಿನಗಳ ಶಿಬಿರದಲ್ಲಿ ಯೋಗಗುರು ಚೇತನ್ ಗರೂಜಿಯ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ಜತೆಗೆ ಮಾನಸಿಕ ಬದಲಾವಣೆಗೆ ಅನೇಕ ನೀತಿ ಕಥೆಗಳು. ಪ್ರಾಪಂಚಿಕ ಮತ್ತು ಸಾಂಸಾರಿಕ ಹೊಂದಾಣಿಕೆಯ ಜೀವನ ನಡೆಸಲು ಬೇಕಾದ ಕ್ರೀಡೆಗಳು, ಸಾಮಾಜಿಕ ಸಮತೋಲನ ಕಾಪಾಡುವುದು ಹೇಗೆ ಎನ್ನುವ ವಿಚಾರಗಳನ್ನು ಕ್ರೀಡೆಗಳ ಮೂಲಕ ಕಲಿಸಲಾಯಿತು.

ಅಷ್ಟೇ ಅಲ್ಲದೆ ನಗು ಸಹ ಮನುಷ್ಯನಿಗೆ ಔಷಧಿಯಾಗಿರುವ ಕಾರಣ ಹಾಸ್ಯ ತುಣುಕುಗಳನ್ನು ಹೇಳಿ ಅವರಿಗೆ ನಗಿಸುವ ಪ್ರಯತ್ನ ಮಾಡುವುದು. ತಮ್ಮಲ್ಲಿನ ವಯಕ್ತಿಕ ಆರೋಗ್ಯ ಸಮಸ್ಯೆಗಳ ನಿವಾರಣೆ, ಅಲ್ಲದೆ ನಿಸರ್ಗದ ತಾಣಗಳಿಗೆ ಪ್ರವಾಸ ಕರೆದೊಯ್ದು ಅಲ್ಲಿನ ಪರಿಸರದ ಮಹತ್ವ ಬಗ್ಗೆಅರಿವು ಮೂಡಿಸುವ ಕಾರ್ಯಕ್ರಮ. ರಕ್ತದಾನ ಶಿಬಿರ ಸೇರಿದಂತೆ ಸಾಮಾಜಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರಿಗೆ ನಮ್ಮ ಅರೇಹಳ್ಳಿಯ ಶಿಬಿರಾರ್ಥಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಯೋಗಗುರು ಚೇತನ್ ಗರೂಜಿ ಮಾತನಾಡಿ, ಇಂದು ಮನುಷ್ಯ ತಮ್ಮ ದಿನನಿತ್ಯದ ಜಂಜಾಟದಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿರುವುದರಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗುತಿದ್ದಾನೆ. ಆದರೆ ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಕೆಲ ಸಮಯ ಬಿಡುವು ಮಾಡಿಕೊಂಡು ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನದ ಜತೆಗೆ ಮಾನಸಿಕ ನೆಮ್ಮದಿ ಪಡೆಯಲು ಮುಂದಾಗಬೇಕು ಎಂದರು.