ಜಿಲ್ಲೆ

ಆರೋಗ್ಯಕ್ಕಾಗಿ ಉತ್ತಮ ಪರಿಸರ ಅಗತ್ಯ

ಕುಶಾಲನಗರ: ಪ್ರಸ್ತುತ ಆರೋಗ್ಯಕರ ಬದುಕನ್ನು ನಡೆಸಲು ಉತ್ತಮ ಜೀವನ ಶೈಲಿಯೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅತಿ ಅಗತ್ಯವಾಗಿದೆ. ಅದಕ್ಕಾಗಿ ನಾವು ಮರ-ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಸಲಹೆ ನೀಡಿದರು.


ಕುಶಾಲನಗರದ ಟೀಂ ಆ್ಯಟಿಟ್ಯೂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಸೀಜನ್-7ರ ಬೇಸಿಗೆ ಶಿಬಿರದ ಅಂಗವಾಗಿ ಭಾನುವಾರ ಕಾವೇರಿ ಉದ್ಯಾನದಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ದಿನೆ ದಿನೇ ಹೆಚ್ಚುತ್ತಿರುವ ಭೂಮಿಯ ತಾಪಮಾನವನ್ನು ಕಡಿಮೆ ಮಾಡಲು ಹಾಗೂ ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬರೂ ಮರ-ಗಿಡಗಳನ್ನು ನೆಟ್ಟು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.


ಟೀಂ ಆ್ಯಟಿಟ್ಯೂಡ್ ಕಲ್ಚರಲ್ ಅಕಾಡೆಮಿಯ ಪ್ರಮುಖ ಸಚಿನ್ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಅಗತ್ಯವಿದೆ. ಆದ್ದರಿಂದ ಅಕಾಡೆಮಿಯ ವತಿಯಿಂದ ಬೇಸಿಗೆ ಶಿಬಿರದ ಅಂಗವಾಗಿ ಪ್ರತಿವರ್ಷ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ಅಕಾಡೆಮಿಯ ನೃತ್ಯ ಸಂಯೋಜಕ ಕಿರಣ್, ಚಂದನ್, ಪಾಲಕರಾದ ಅಕ್ಷತಾ, ಇಂದಿರಾ, ಶ್ರುತಿ, ವೀಣಾ, ಶ್ವೇತಾ, ತುಳಸಿ, ಮಾನಸಾ, ಮಮತಾ, ಸೌಮ್ಯಾ ಮತ್ತಿತರರು ಹಾಜರಿದ್ದರು.