ಜಿಲ್ಲೆ

ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಿ, ನ್ಯಾಯಾಧೀಶ ಲಕ್ಷ್ಮಿಕಾಂತ್ ಮಿಸ್ಕಿನ್ ಕರೆ

ಚಿಕ್ಕಬಳ್ಳಾಪುರ: ಅಪೌಷ್ಟಿಕತೆ ನಿವಾರಣೆ ಮೂಲಕ ಆರೋಗ್ಯಕರ ಸಮಾಜ ನಿರ್ಮಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲಕ್ಷ್ಮಿಕಾಂತ್ ಮಿಸ್ಕಿನ್ ಸಲಹೆ ನೀಡಿದರು.

ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ, ಪ್ರಧಾನಮಂತ್ರಿ ಮಾತೃವಂದನಾ ಸಪ್ತಾಹ ಹಾಗೂ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯು ಹಾಲು, ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ಆದರೆ, ಸ್ವಯಂ ಸೇವನೆಗಿಂತಲೂ ವಹಿವಾಟಿಗೆ ಆದ್ಯತೆ ನೀಡಲಾಗುತ್ತಿದ್ದು, ಈ ಧೋರಣೆ ಬಿಟ್ಟು ಪೌಷ್ಟಿಕತೆ ಹೆಚ್ಚಿಸಿಕೊಳ್ಳಲು ರೈತರು ಮತ್ತು ಕುಟುಂಬದ ಸದಸ್ಯರು ಒಳ್ಳೆಯ ಆಹಾರ ಸೇವಿಸಬೇಕು. ಅದರಲ್ಲೂ ತಾಯಿ ಮತ್ತು ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ತೋರಬೇಕು ಎಂದರು.

ಅಪೌಷ್ಟಿಕತೆ ನಿವಾರಣೆ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಗಳಿಗೂ ತಲುಪಿಸಬೇಕು. ಗರ್ಭಿಣಿಯರು, ಬಾಣಂತಿಯರು, ಹದಿಹರೆಯದವರಿಗೆ ಪೌಷ್ಟಿಕ ಆಹಾರ ಸೇವನೆ, ನೈರ್ಮಲ್ಯ, ವೈಯಕ್ತಿಕ ಶುಚಿತ್ವ, ಶೌಚಗೃಹ ಸಮರ್ಪಕ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ರವಿಕುಮಾರ್ ಅಭಿಪ್ರಾಯಪಟ್ಟರು.

ಅಪೌಷ್ಟಿಕ ಸಮಸ್ಯೆಯುಳ್ಳವರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಕಬ್ಬಿಣಾಂಶವುಳ್ಳ ಮಾತ್ರೆ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಒದಗಿಸುತ್ತಿರುವ ಸೇವೆಯ ಸದ್ವಿನಿಯೋಗ ಪಡೆಯಬೇಕು ಎಂದರು.

ಪ್ರಧಾನಮಂತ್ರಿ ಮಾತೃ ವಂದನಾ ಕಾರ್ಯಕ್ರಮದಡಿ ಬಡ ಗರ್ಭಿಣಿಯರ ಆರೈಕೆಗಾಗಿ ವಿವಿಧ ಹಂತಗಳಲ್ಲಿ 5 ಸಾವಿರ ರೂ.ವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ, ಜತೆಗೆ ಅಂಗನವಾಡಿಗಳ ಮೂಲಕ ನೀಡುತ್ತಿರುವ ಪೌಷ್ಟಿಕ ಆಹಾರ ಮತ್ತು ಇತರ ಸವಲತ್ತುಗಳನ್ನು ಬಳಸಿಕೊಂಡು ಅಪೌಷ್ಟಿಕತೆಯ ಸಮಸ್ಯೆಯಿಂದ ದೂರವಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್.ನಟರಾಜ್ ತಿಳಿಸಿದರು.

ಕಡ್ಡಾಯವಾಗಿ ಲಸಿಕೆ ಹಾಕಿಸಿ: ಮಗು ಜನಿಸಿದ ಅರ್ಧ ಗಂಟೆ ಒಳಗೆ ತಾಯಿ ಹಾಲು ಕುಡಿಸಬೇಕು. ಬಾಣಂತಿ ಆರು ತಿಂಗಳವರೆಗೆ ಮುಂದುವರೆಸಬೇಕು ಹೊರತು ಬೇರೆ ಯಾವುದೇ ಪೂರಕ ಪೌಷ್ಟಿಕ ಆಹಾರ ನೀಡಬಾರದು. ಒಂದು ವರ್ಷದ ನಂತರ ಮಗುವಿಗೆ ಎಲ್ಲ ರೀತಿಯ ಆಹಾರವನ್ನು ನೀಡಬಹುದು, 5 ವರ್ಷದ ಒಳಗಿನ ಮಕ್ಕಳಿಗೆ ಆರೋಗ್ಯ ಇಲಾಖೆ ನಿಗದಿಪಡಿಸಿರುವ ಲಸಿಕೆಗಳನ್ನು ಕಡ್ಡಾಯವಾಗಿ ಹಾಕಿಸಬೇಕು ಎಂದು ಮಕ್ಕಳ ತಜ್ಞ ರವಿಕುಮಾರ್ ಮಾಹಿತಿ ನೀಡಿದರು.

ಅಪೌಷ್ಟಿಕತೆ ಮೌಲ್ಯಮಾಪಕರ ಆಯ್ಕೆ: ಮಕ್ಕಳ ತಜ್ಞೆ ಗಾಯತ್ರಿ ಮತ್ತು ಆಹಾರ ತಜ್ಞೆ ಮಂಜುಳಾ ಅವರನ್ನು ಮಕ್ಕಳ ಅಪೌಷ್ಟಿಕತೆ ನಿವಾರಣೆಯ ರಾಷ್ಟ್ರೀಯ ಮೌಲ್ಯಮಾಪಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಸ್ವತ್ರೆಯ ಶಸ್ತ್ರಚಿಕಿತ್ಸಕ ರುದ್ರಮೂರ್ತಿ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯ ಎನ್‌ಆರ್‌ಸಿ ವಿಭಾಗ 2019-20ನೇ ಸಾಲಿನಲ್ಲಿ 128 ತೀವ್ರ ಅಪೌಷ್ಟಿಕ ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿತ್ತು. ಈ ವಿಭಾಗದಲ್ಲಿ ಕೆಲಸ ಮಾಡಿದ ತಜ್ಞರನ್ನು ರಾಷ್ಟ್ರೀಯ ಮೌಲ್ಯಮಾಪಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು. ಕರೊನಾ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಾಗಿ ತಜ್ಞರು ವರದಿ ನೀಡಿದ್ದು, ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂಬ ಅಭಿಪ್ರಾಯಪಟ್ಟರು.

ಆರ್‌ಎಂಒ ಡಾ.ರಮೇಶ್, ಶಿಶು ಅಭಿವೃದ್ಧಿ ಅಧಿಕಾರಿ ಗಂಗಾಧರಯ್ಯ ಮತ್ತಿತರರು ಇದ್ದರು.