ಚಿತ್ರದುರ್ಗ: ಬಾಲಕಿಯರು ಅಪೌಷ್ಟಿಕತೆ, ರಕ್ತಹೀನತೆ, ಥೈರಾಯಿಡ್, ದೃಷ್ಟಿ ದೋಷ, ಸ್ವಂಟ, ತಲೆ ನೋವುಗಳಂತಹ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದು, ಪೌಷ್ಟಿಕ ಆಹಾರ ಸೇವನೆಯೇ ಇದಕ್ಕೆ ಮದ್ದು ಎಂದು ಜಿಲ್ಲಾಸ್ಪತ್ರೆಯ ವೈದ್ಯೆ ಡಾ.ಶ್ರೀಕಲಾ ಸಲಹೆ ನೀಡಿದರು.
ಐನಳ್ಳಿ ಕುರುಬರಹಳ್ಳಿ ಗ್ರಾಮದಲ್ಲಿ ಆರೋಗ್ಯ ಇಲಾಖೆ, ವಿಮುಕ್ತಿ ವಿದ್ಯಾಸಂಸ್ಥೆ, ಸರ್ಕಾರಿ ಪ್ರೌಢಶಾಲೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಿಶೋರಿಯರ ಆರೋಗ್ಯ ಜಾಗೃತಿ, ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಾಲಕಿಯರ ಹಲವು ಆರೋಗ್ಯ ಸಮಸ್ಯೆ ನಿವಾರಣೆಗೆ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು ಸೇವನೆ ಅತ್ಯಗತ್ಯ. ಧ್ಯಾನ, ಯೋಗವೂ ಮುಖ್ಯ ಎಂದು ಹೇಳಿದರು.
ಕಿರಿಯ ವಯಸ್ಸಿನಲ್ಲಿ ಮುಜುಗರಕ್ಕೆ ಒಳಗಾಗಿ ತಮ್ಮ ಆರೋಗ್ಯ ಸಮಸ್ಯೆ ಹೇಳಿಕೊಳ್ಳದೆ ಅನಾರೋಗ್ಯ ಪೀಡಿತರಾಗುವುದೇ ಹೆಚ್ಚು. ಹೀಗಾಗಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆಯ ಅಗತ್ಯವಿದೆ ಎಂದು ತಿಳಿಸಿದರು.
ಸಂಚಾರಿ ವೈದ್ಯಾಧಿಕಾರಿ ಡಾ.ಮಂಜರಿ, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿ ಲಕ್ಷ್ಮಿದೇವಿ, ಗ್ರಾಪಂ ಅಧ್ಯಕ್ಷೆ ಉಮೇಶ್, ಶಂಕರಮ್ಮ, ಸುಧಾಮಣಿ, ಮಂಜಪ್ಪ, ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷೆ ಅನ್ನಪೂರ್ಣ, ನಾಗರತ್ನ, ಬಿಬಿಜಾನ್, ಎಚ್.ಕುಮಾರ್, ಅರಣ್ಯಸಾಗರ್ ಇತರರಿದ್ದರು.