ಮಡಿಕೇರಿ: ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿ ತಡೆಯುವಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಆರೋಗ್ಯ ಶಿಕ್ಷಣ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಅವರ ಕಚೇರಿ ಸಭಾಂಗಣದಲ್ಲಿ ಅತಿಸಾರ ಭೇದಿ ತಡೆಯುವಿಕೆ ಅಭಿಯಾನ ಕುರಿತು ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಪದೇ ಪದೇ ಅತಿಸಾರ ಭೇದಿ ಉಂಟಾಗುತ್ತದೆ. ಆದ್ದರಿಂದ ಅತಿಸಾರ ಭೇದಿ ತಡೆಯುವಲ್ಲಿ ಪ್ರತಿಯೊಬ್ಬರಲ್ಲಿಯೂ ಅರಿವು ಅಗತ್ಯ ಎಂದ ಅವರು, ಅತಿಸಾರ ಭೇದಿಯ ನಿಯಂತ್ರಣ ಮತ್ತು ತಡೆಯುವಿಕೆ ಕುರಿತು ಸ್ವಚ್ಛತೆ, ಪರಿಸರ ಶುಚಿತ್ವಕ್ಕೆ ಗಮನಹರಿಸಬೇಕು. ಓಆರ್‌ಎಸ್ ಮತ್ತು ಜಿಂಕ್ ಲಭ್ಯತೆ ಕಾಯ್ದುಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಅತಿಸಾರ ಭೇದಿ ತಡೆಗಟ್ಟುವಿಕೆ ಅಭಿಯಾನವು ಈಗಾಗಲೇ ಆರಂಭವಾಗಿದ್ದು, ಜು.೩೧ ರವರೆಗೆ ಸಮುದಾಯ ಮತ್ತು ಗ್ರಾಮೀಣ ಮಟ್ಟದಲ್ಲಿ ಜರುಗಲಿದೆ. ಅತಿಸಾರ ಭೇದಿ ತಡೆಯುವಿಕೆ ಅಭಿಯಾನದಡಿ ಸಮುದಾಯ ಮತ್ತು ಗ್ರಾಮ ಮಟ್ಟದಲ್ಲಿ ಓಆರ್‌ಎಸ್ ಹಂಚುವುದು ಮತ್ತು ಅದನ್ನು ತಯಾರಿಸುವ ವಿಧಾನ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಕೈ ತೊಳೆಯುವ ವಿಧಾನ ಕುರಿತು ಶಾಲೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ನಗರ ಪ್ರದೇಶದಲ್ಲಿ ಸಂಚಾರಿ ಆರೋಗ್ಯ ತಂಡ ಮೂಲಕ ಜಾಗೃತಿ ಆಯೋಜಿಸಲಾಗುತ್ತದೆ ಎಂದರು.
ಕೈತೊಳೆಯುವ ವೈಜ್ಞಾನಿಕ ವಿಧಾನವನ್ನು ಶಾಲಾ ಮಕ್ಕಳಿಗೆ ತಿಳಿಸುವಲ್ಲಿ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುತ್ತದೆ. ಭಿತ್ತಿಪತ್ರ ಹಾಗೂ ಗೋಡೆ ಬರಹಗಳ ಮೂಲಕ ಅರಿವು ಮೂಡಿಸುವುದು, ಶಾಲೆಗಳಲ್ಲಿ ಬೆಳಗ್ಗಿನ ಪ್ರಾರ್ಥನೆಯ ನಂತರ ಕೈತೊಳೆಯುವ ಮಹತ್ವ ಮತ್ತು ಲಾಭ ಕುರಿತು ಮಾಹಿತಿ ನೀಡಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ತಿಪ್ಪಣ್ಣ ಸಿರಸಗಿ ಮಾಹಿತಿ ನೀಡಿ, ಶಿಕ್ಷಣ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸುವುದು, ತಾಯಂದಿರೊಂದಿಗೆ ಸಮಾಲೋಚನೆ ಮತ್ತು ಪ್ರಾತ್ಯಕ್ಷಿಕೆ ಮಾಡಲಾಗುವುದು. ಓಆರ್‌ಎಸ್ ದ್ರಾವಣ ತಯಾರಿಕೆ ಮತ್ತು ಜಿಂಕ್ ಮಾತ್ರೆ ಬಳಕೆ, ಸ್ತನ್ಯಪಾನ ಸೇರಿದಂತೆ ಮುಂದುವರಿದ ಆಹಾರವನ್ನು ಉತ್ತೇಜಿಸುವ ಸಂಬಂಧ ಅಂಗನವಾಡಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ ಮಾತನಾಡಿ, ಅತಿಸಾರ ಭೇದಿ ತಡೆಯುವ ಸಂಬಂಧ ಶಾಲಾ ಮಕ್ಕಳಲ್ಲಿ ಜಾಥಾ ಏರ್ಪಡಿಸಿ ಅರಿವು ಮೂಡಿಸಲಾಗುತ್ತದೆ. ಶೌಚಾಲಯಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಪೌರಾಯುಕ್ತ ಎಚ್.ಆರ್.ರಮೇಶ್ ಮಾಹಿತಿ ನೀಡಿ, ನಗರ ಪ್ರದೇಶಗಳಲ್ಲಿ ಸುರಕ್ಷಿತ ನೀರು ಪೂರೈಕೆ ಬಗ್ಗೆ ಗಮನಹರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮೊಬೈಲ್ ತಂಡಗಳ ನಿಯೋಜನೆ ಮಾಡಬೇಕಿದೆ. ಓಆರ್‌ಎಸ್ ಮತ್ತು ಜಿಂಕ್ ಮಾತ್ರೆ ಬಗ್ಗೆ ಕಸ ಸಂಗ್ರಹಣೆ ಮತ್ತು ವಿಲೇವಾರಿ ವಾಹನಗಳನ್ನು ಬಳಸಿಕೊಂಡು ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಶರತ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ.ಚೇತನ್(ಮಡಿಕೇರಿ), ಡಾ.ಯತಿರಾಜು(ವಿರಾಜಪೇಟೆ), ಡಾ.ಇಂದೂಧರ(ಸೋಮವಾರಪೇಟೆ), ಇಂಡಿಯನ್ ಮೆಡಿಕಲ್ ಅಸೋಷಿಯೇಷನ್‌ನ ಪ್ರತಿನಿಧಿ ಡಾ.ಶ್ಯಾಮ್ ಅಪ್ಪಣ್ಣ, ಪರಿಸರ ಅಧಿಕಾರಿ ರಘುರಾಮ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ
ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಸಭೆಯಲ್ಲಿ ಹೇಳಿದರು.
ಜನವರಿಯಿಂದ ಇಲ್ಲಿಯವರೆಗೆ ೩ ಪ್ರಕರಣ ಕಂಡು ಬಂದಿದ್ದು, ಮೂವರು ಸಹ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಡೆಂಗ್ಯೂ ನಿಯಂತ್ರಣ ಸಂಬಂಧಿಸಿದಂತೆ ಸುತ್ತಮುತ್ತಲಿನ ಪರಿಸರ ಶುಚಿತ್ವ ಅತೀ ಮುಖ್ಯವಾಗಿದೆ. ಟೈಯರ್, ತೆಂಗಿನ ಚಿಪ್ಪು, ಡಬ್ಬಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳು ಉತ್ಪಾದನೆಯಾಗದಂತೆ ಗಮನಹರಿಸುವುದು ಅತೀ ಮುಖ್ಯವಾಗಿದೆ ಎಂದರು.
ಚರಂಡಿ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕು. ಹೆಚ್ಚು ದಟ್ಟಣೆ ಪ್ರದೇಶಗಳಲ್ಲಿ ಸ್ವಚ್ಛತೆ ಜೊತೆಗೆ ಆರೋಗ್ಯ ಶಿಕ್ಷಣ ಮೂಲಕ ಅರಿವು ಮೂಡಿಸಲಾಗುತ್ತದೆ. ಕೈಗಾರಿಕಾ ಪ್ರದೇಶಗಳು ಸೇರಿದಂತೆ ಹಲವು ಕಡೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.