ಅರಸೀಕೆರೆ: ಬೇಸಿಗೆ ದಿನಗಳು ಅರಂಭವಾಗಿದ್ದು, ಜನರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಉಪತಹಸೀಲ್ದಾರ್ ಪಾಲಾಕ್ಷ ಸಲಹೆ ನೀಡಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ತಡೆ ಕುರಿತು ಆರೋಗ್ಯ ಇಲಾಖೆ ವತಿಯಿಂದ ಸೋಮವಾರ ಮಧ್ಯಾಹ್ನ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲುಷಿತ ನೀರು ಸೇವನೆಯಿಂದಾಗಿ ಕರುಳು ಬೇನೆ, ಅತಿಸಾರ, ಶೀತ, ಜ್ವರ, ಕಾಲರ ಸೇರಿದಂತೆ ವಿವಿಧ ರೋಗಗಳು ಕಾಡುವ ಸಾಧ್ಯತೆಯಿದೆ. ವೈದ್ಯರ ಸಲಹೆಯಂತೆ ಮುಂಜಾಗ್ರತಾ ಕ್ರಮವಾಗಿ ಕಾಯಿಸಿ ಆರಿಸಿದ ನೀರು ಕುಡಿಯುವುದರಿಂದ ಅಪಾಯ ತಡೆಗಟ್ಟಲು ಸಾಧ್ಯವಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು ಮಾತನಾಡಿ, ಮನೆಯ ಅಸುಪಾಸಿನಲ್ಲಿ ಕೊಳಚೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಜಾತ್ರೆ, ರಥೋತ್ಸವಗಳು ಹತ್ತಿರವಾಗುತ್ತಿದೆ. ಗಾಳಿ, ಧೂಳಿನಿಂದ ಆಹಾರ ಪದಾರ್ಥದ ಮೇಲೆ ಕ್ರಿಮಿಕೀಟಗಳು ಕುಳಿತು ಆರೋಗ್ಯಕ್ಕೆ ತೊಂದರೆಯಾಗಲಿದ್ದು, ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ನಾಗರಿಕರು ತೆಗೆದುಕೊಳ್ಳಬೇಕು. ಇಲಾಖೆ ವತಿಯಿಂದಲೂ ಕರಪತ್ರ, ಧ್ವನಿವರ್ಧಕದ ಪ್ರಕಟಣೆ ಮೂಲಕ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎ.ಪಿ.ಶಿವಕುಮಾರ್, ಬಿಇಒ ಮೋಹನ್‌ಕುಮಾರ್, ಆಹಾರ ಶಿರಸ್ತೇದಾರ್ ಬಾಲಚಂದ್ರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಶಿವಮೂರ್ತಿ, ಜೆ.ಸಿ.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಇತರರಿದ್ದರು.