ಜಿಲ್ಲೆ

ಆರೋಗ್ಯ ರಕ್ಷಣೆಗೆ ಕ್ರೀಡೆ ಸಹಕಾರಿ:ಸಿ.ಕೆ. ಹರೀಶ್

ಹಾಸನ: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನೋರಂಜನೇಯ ಜತೆಗೆ ಆರೋಗ್ಯ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಕೆ. ಹರೀಶ್ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಾಗೂ ಪತ್ರಕರ್ತ ಎ.ಬಿ. ಮುರಳಿ ಸ್ಮರಣಾರ್ಥ ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಜತೆಗೆ ಸಹಕಾರ ಮನೋಭಾವ, ಇತರರನ್ನು ಗೌರವಿಸುವುದು, ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವು ಬೆಳೆಯುತ್ತದೆ. ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ಸಮರ್ಪಣಾ ಭಾವದಿಂದ ಇರುತ್ತೇವೆ ಎಂದರು.
ಪ್ರತಿಯೊಬ್ಬರೂ ಪ್ರತಿದಿನ ಒಂದು ಗಂಟೆ ಬಿಡುವು ಮಾಡಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಉತ್ತಮ, ಪತ್ರಕರ್ತರು ತಮ್ಮ ವೃತ್ತಿ ಜತೆಗೆ ಕೌಟುಂಬಿಕ ಬದುಕಿನ ಏಳಿಗೆಗೆ ಸಮಯ ಮೀಸಲಿಡಬೇಕು. ಪ್ರತಿ ವರ್ಷ ಕ್ರೀಡಾ ಚಟುವಟಿಕೆಗೆ ನಮ್ಮ ಸಹಕಾರ ಇರಲಿದೆ. ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು .
ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮಾ ಅವರು ಮಾತನಾಡಿ, ಪತ್ರಕರ್ತರ ಸಂಘವು ಸಂಘಟಿತವಾಗಿ ಪ್ರತಿವರ್ಷ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ಸಂತಸದ ವಿಷಯ. ಇದೇ ರೀತಿ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿ ಎಂದು ಶುಭ ಕೋರಿದರು.
ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಬಶೀರ್ ಅವರು ಮಾತನಾಡಿ, ಪತ್ರಕರ್ತರು ವಾರ್ಷಿಕ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೇಹಕ್ಕೆ, ಮನಸ್ಸಿಗೆ ಉತ್ತಮ ವ್ಯಾಯಾಮವಾಗಲಿದೆ. ಸ್ನೇಹಿತರೊಂದಿಗೆ ಜೊತೆಗೂಡಿದಲ್ಲಿ ಸಂಬಂಧ ವೃದ್ಧಿಗೂ ಸಹಕಾರಿಯಾಗಲಿದೆ. ಮಾಧ್ಯಮ ಸಮುದಾಯದ ಭಾವನೆ ಬೆಳವಣಿಗೆಗೆ ಇದು ಉತ್ತಮ ವೇದಿಕೆ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತರಾದ ರವಿ ನಾಕಲಗೂಡು ಅವರು ಮಾತನಾಡಿ, ಸಂಘವು ಹಲವು ವರ್ಷಗಳಿಂದ ಸಂಘಟಿತವಾಗಿ ಮುನ್ನಡೆಯುತ್ತಿದ್ದು ರಾಜ್ಯ ಘಟಕದ ಅಧ್ಯಕ್ಷರಾದ ಶಿವಾನಂದ ತಗಡೂರು, ಈ ಹಿಂದೆ ಜಿಲ್ಲಾಧ್ಯಕ್ಷರಾಗಿದ್ದ ಮದನಗೌಡರು, ಕೆ.ಆರ್ ಮಂಜುನಾಥ್, ಉದಯ್ ಕುಮಾರ್ ಬಾಳ್ಳುಗೋಪಾಲ್, ಪ್ರಸನ್ನ ಕುಮಾರ್ ಸೇರಿದಂತೆ ಹಲವರು ಸಂಘದ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ರಾಜ್ಯ ಸಂಘದ ಸಹಕಾರದೊಂದಿಗೆ ಹಾಗೂ ಶಿವಾನಂದ ತಗಡೂರ್ ಅವರ ಕಾರ್ಯ ವೈಖರಿಯಿಂದ ಸಂಘವು ಇಷ್ಟು ಎತ್ತರಕ್ಕೆ ಬೆಳೆಯುತ್ತಿದ್ದು ಈ ರೀತಿಯ ಕ್ರೀಡಾಕೂಟಗಳ ಆಯೋಜನೆ ಪತ್ರಕರ್ತರ ಆರೋಗ್ಯ ವೃದ್ಧಿಗೆ ಉತ್ತಮ ವೇದಿಕೆ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್. ವೇಣು ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್, ಉಪಾಧ್ಯಕ್ಷ ಕೆ.ಎಂ ಹರೀಶ್, ಎಚ್.ಟಿ. ಮೋಹನ್, ಕಾರ್ಯದರ್ಶಿ ಸಿ.ಬಿ ಸಂತೋಷ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಜರಿದ್ದರು.