ಜಿಲ್ಲೆ

ಆರೋಗ್ಯ ರಕ್ಷಕಿ ಆಶಾ ನೌಕರ ಆಗಲಿ

ಕಲಬುರಗಿ: ನಿರಂತರವಾಗಿ ಆರೋಗ್ಯ ಸೇರಿ ವಿವಿಧ ಕ್ಷೇತ್ರಗಳು, ವಿಭಾಗಗಳಲ್ಲಿ ಸರ್ಕಾರದ ಬೆನ್ನೆಲುಬಾಗಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಜೀವನಕ್ಕೆ ಸೇವಾ ಭದ್ರತೆ ಇಲ್ಲದಂತಾಗಿದೆ. ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು ಎಂದು ಎಐಯುಟಿಯುಸಿ ಜಿಲ್ಲಾ ಸಂಚಾಲಕ ಎಸ್.ಎಂ.ಶರ್ಮಾ ಆಗ್ರಹಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಭಾನುವಾರ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಲ್ ಇಂಡಿಯ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲೂಕು ಪ್ರಥಮ ಸಮ್ಮೇಳನದಲ್ಲಿ ಮಾತನಾಡಿ, ೨೦೦೮ರಿಂದ ಆಶಾ ಕಾರ್ಯಕರ್ತೆಯರು ಬಿಡುವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅತ್ಯಲ್ಪ ಗೌರವ ಧನ ನೀಡುತ್ತಿರುವುದು ಸರಿಯಲ್ಲ. ಜನರಿಗೆ ಆರೋಗ್ಯ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಪ್ರತಿ ಯೋಜನೆ ಜಾರಿಗೆ ಕೆಲಸ ಮಾಡುತ್ತಿದ್ದು, ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಆರ್‌ಸಿಎಚ್‌ಒ ಶರಣಬಸಪ್ಪ ಕ್ಯಾತನಾಳ ಮಾತನಾಡಿ, ಆರೋಗ್ಯ ಇಲಾಖೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರ ಜತೆ ಆರೋಗ್ಯ ಇಲಾಖೆ ನಿಲ್ಲಲಿದೆ. ಆಶಾ ಶ್ರಮದಿಂದ ಸರ್ಕಾರದ ಹಲವು ಯೋಜನೆ, ಆರೋಗ್ಯ ಸುಧಾರಣೆ ಆಗುತ್ತಿದೆ ಎಂದು ಹೇಳಿದರು.
ಮನವಿಗಳಿಗೆ ಸ್ಪಂದಿಸದ ಸರ್ಕಾರ: ಕಾಂಗ್ರೆಸ್, ಬಿಜೆಪಿ ಸೇರಿ ಯಾವುದೇ ಸರ್ಕಾರ ಬಂದರೂ ಆಶಾಗಳ ಜೀವನ ಬದಲಾವಣೆ ಆಗಿಲ್ಲ. ಕೋವಿಡ್‌ನಂತ ಸಂದಿಗ್ಧ ಸ್ಥಿತಿಯಲ್ಲೂ ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿದ್ದರು. ನಿತ್ಯ ಜನರೊಂದಿಗಿದ್ದು, ಸೇವೆ ಮಾಡುವ ಕೆಲಸ ಶ್ರೇಷ್ಠವಾಗಿದೆ. ಆದರೆ ಸರ್ಕಾರ ಮನವಿ ಪತ್ರಗಳಿಗೆ ಸ್ಪಂದಿಸುತ್ತಿಲ್ಲ. ಹೋರಾಟ ಅನಿವಾರ್ಯ. ಒಗ್ಗಟ್ಟು ಪ್ರದರ್ಶಿಸಬೇಕು ಎಂದು ವೇದಿಕೆಯಲ್ಲಿದ್ದವರು ಘೋಷಿಸಿದರು.
ಜಿಲ್ಲಾ ಸಂಚಾಲಕ ವಿ.ಜಿ.ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಎಐಎಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಗುಂಡಮ್ಮ ಮಡಿವಾಳ, ಎಐಯುಟಿಯುಸಿ ಉಪಾಧ್ಯಕ್ಷ ರಾಘವೇಂದ್ರ ಎಂ.ಜಿ. ಮಾತನಾಡಿದರು. ಶಿವಲಿಂಗಮ್ಮ, ಶಾಂತಾ ಹರಸೂರ, ಸಂಗೀತಾ ಸಾವಳಗಿ, ಮಲ್ಲಮ್ಮ, ಭಾಗ್ಯಶ್ರೀ ಇತರರಿದ್ದರು. ಸಮ್ಮೇಳನಕ್ಕೂ ಮುನ್ನ ಆಶಾಕಾರ್ಯಕರ್ತೆಯರು ನಗರದ ಜಗತ್ ವೃತ್ತದಿಂದ ಅನ್ನಪೂರ್ಣ ಕ್ರಾಸ್ ಮೂಲಕ ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದವರೆಗೆ ಮೆರವಣಿಗೆ ನಡೆಸಿದರು.