ಜಿಲ್ಲೆ

ಆರೋಗ್ಯ ಪೂರ್ಣ ಸಮಾಜಕ್ಕೆ ಆಯಿಸ್ ನಿಂದ ಕಾಣಿಕೆ: ಮೇಯರ್ ಶಿವಕುಮಾರ್ ಬಣ್ಣನೆ

ಮೈಸೂರು: ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ಗಮನಾರ್ಹ ಕಾಣಿಕೆ ನೀಡುತ್ತಿದೆ ಎಂದು ಮೇಯರ್ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನಸಗಂಗೋತ್ರಿಯಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಸಂವಹನ ಅಸ್ವಸ್ಥತೆ ಹೊಂದಿರುವ ಮಕ್ಕಳ ವಿಶೇಷ ಶಿಕ್ಷಕರನ್ನು ಸಶಕ್ತಗೊಳಿಸುವ ಸಾಮರ್ಥ್ಯ ನಿರ್ಮಾಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಹನ ಸಮಸ್ಯೆ ಎದುರಿಸುತ್ತಿರುವ ವಿಶೇಷ ಮಕ್ಕಳ ಆರೈಕೆ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದು ಸುಲಭವಲ್ಲ. ಈ ಕಾರ್ಯ ಮಾಡುತ್ತಿರುವ ವಿಶೇಷ ಶಿಕ್ಷಕರ ಕಾರ್ಯ ಪ್ರಶಂಸನೀಯವಾಗಿದೆ. ಹೀಗಾಗಿಯೇ ಶಿಕ್ಷರಿಗೆ ತರಬೇತಿ ನೀಡುವುದಲ್ಲದೇ ವಿಶೇಷ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಮ್ಮ ಮೈಸೂರಿಗೆ ಹೆಮ್ಮೆ ಎಂದು ಬಣ್ಣಿಸಿದರು.
ವಿಶೇಷ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಸಂಸ್ಥೆಗೆ ಪಾಲಿಕೆ ಒತ್ತಾಸೆಯಾಗಿ ಇದೆ. ವಿಶೇಷ ಮಕ್ಕಳ ಉದ್ಯಾನ ನಿರ್ಮಾಣಕ್ಕೆ ಪಾಲಿಕೆ ಕೈ ಜೋಡಿಸಿದ್ದು, 75 ಲಕ್ಷ ರೂ. ನೆರವು ನೀಡಲಾಗುವುದು. ಮುಂದೆಯೂ ಅಗತ್ಯ ಬಿದ್ದರೆ ಹೆಚ್ಚುವರಿಯಾಗಿಯೂ ನೆರವು ನೀಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಎಲ್ಲ ವಿಷಯಗಳಿಗೂ ನುರಿತ ಶಿಕ್ಷಕರು ಸಿಗಬಲ್ಲರು. ಆದರೆ ವಿಶೇಷ ಮಕ್ಕಳಿಗೆ ಚೈತನ್ಯ ತುಂಬುವ ಕಾಳಜಿಯುಳ್ಳ ವಿಶೇಷ ಶಿಕ್ಷಕರು ಸಿಗುವುದು ಅಪರೂಪ. ಸಮಾಜದಲ್ಲಿ ಎಲ್ಲರಂತೆ ಬದುಕಲು ಅಗತ್ಯ ಕೌಶಲ್ಯ ತರಬೇತಿ ನೀಡುತ್ತಿರುವ ಶಿಕ್ಷಕರ ತಾಳ್ಮೆ, ಅವರ ಆಸಕ್ತಿ ನೋಡಿದಾಗ ಇದು ದೇವರ ಕಾರ್ಯ ಎನ್ನುವ ಅನುಭವವಾಗುತ್ತದೆ ಎಂದು ಬಣ್ಣಿಸಿದರು.
ಸುಮಾರು ಐವತ್ತು ವರ್ಷಗಳಿಂದ ನಿರಂತರ ತರಬೇತಿ, ಚಿಕಿತ್ಸೆ ನೀಡುತ್ತಿರುವ ಸಂಸ್ಥೆಯು ಸಾವಿರಾರು ನುರಿತ ತಂತ್ರಜ್ಞರನ್ನು ನೀಡಿದ್ದು, ಇಲ್ಲಿ ವಿದ್ಯಾಭ್ಯಾಸ ಮಾಡಿದವರು ದೇಶ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಇಲ್ಲಿ ಚಿಕಿತ್ಸೆ ಪಡೆಯಲು, ಕಲಿಯಲು ಎಲ್ಲೆಡೆಯಿಂದಲೂ ಆಗಮಿಸುತ್ತಿದ್ದಾರೆ ಎಂದರು.
ಸಂಸ್ಥೆಯ ವಿಶೇಷ ಶಿಕ್ಷಣ ವಿಭಾಗದ ಡಾ.ಪ್ರೀತಿ ವೆಂಕಟೇಶ್ ವಿಶೇಷ ಮಕ್ಕಳ ಪಠ್ಯಕ್ರಮದ ಕುರಿತು ಮಾತನಾಡಿದರು. ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ, ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಅಲೋಕ್ ಉಪಾಧ್ಯಾಯ, ಡಿ.ದಿವ್ಯಾ ಇದ್ದರು.