ಹನೂರಿನಲ್ಲಿ ಬಿಜೆಪಿ ವತಿಯಿಂದ ಒಬಿಸಿ ಜಿಲ್ಲಾ ಸಂಯೋಜಕ ಜನಧ್ವನಿ ಬಿ.ವೆಂಕಟೇಶ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಜನರು ಮುಗಿಬಿದ್ದರು.  
ಜಿಲ್ಲೆ

ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ

ಹನೂರು: ಪಟ್ಟಣದ ಆರ್.ಎಸ್.ದೊಡ್ಡಿ ಬಳಿಯ ಶ್ರೀ ಗೌರಿಶಂಕರ ಕಲ್ಯಾಣ ಮಂಟಪದ ಸಮೀಪ ಭಾನುವಾರ ತಾಲೂಕು ಬಿಜೆಪಿ ಒಬಿಸಿ ಮೋರ್ಚಾದ ವತಿಯಿಂದ ಜಿಲ್ಲಾ ಸಂಯೋಜಕ ಜನಧ್ವನಿ ಬಿ.ವೆಂಕಟೇಶ್ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.


ಸಮಾಜ ಸೇವೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಕಳೆದ 4 ವರ್ಷದ ಹಿಂದೆ ಹನೂರು ಕ್ಷೇತ್ರಕ್ಕೆ ಆಗಮಿಸಿದ್ದ ಜನಧ್ವನಿ ಬಿ.ವೆಂಕಟೇಶ್ ಅವರು ಜನಾಶ್ರಯ ಟ್ರಸ್ಟ್ ಸ್ಥಾಪಿಸುವುದರ ಮೂಲಕ ಋಣ ಸಂದಾಯ ಯೋಜನೆಯಡಿ ತುರ್ತು ವಾಹನ ಸೌಲಭ್ಯ, ಕುಡಿಯುವ ನೀರಿನ ಸಮಸ್ಯೆ ತಲೆದೂರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ, ಗ್ರಾಮ ಮಟ್ಟದಲ್ಲಿ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ, ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿದ್ದರು.

ಇದೀಗ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಜನರು ಭಾಗವಹಿಸಿದ್ದರು.

ನಡೆದ ತಪಾಸಣೆಗಳು: ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣೆ, ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ, ಡಯಾಬಿಟಿಕ್ ರೆಟಿನಾಪಥಿ, ಎಲ್ಲ ರೀತಿಯ ಕ್ಯಾನ್ಸರ್ ತಪಾಸಣೆ, ಹೃದಯರೋಗ ತಪಾಸಣೆ, ಮೂಳೆ ಮತ್ತು ಕೀಲು, ಅಪೆಂಡಿಕ್ಸ್ ಸ್ಕ್ಯಾನಿಂಗ್, ಮಹಿಳೆಯರಿಗೆ ಸ್ತನ ಕ್ಯಾನ್ಸರ್ , ಗರ್ಭಕೋಶ ತಪಾಸಣೆ, ಮೂಗು, ಕಿವಿ ಹಾಗೂ ಗಂಟಲಿನ ತಪಾಸಣೆ ಸೇರಿದಂತೆ ಸಾಮಾನ್ಯ ಆರೋಗ್ಯ ತಪಾಸಣೆಗಳು ನಡೆದವು. ತಪಾಸಣೆಗೊಳಗಾದ ನ್ಯೂನತೆಯುಳ್ಳ ಕೆಲವರಿಗೆ ಕನ್ನಡಕ, ಗಾಲಿ ಕುರ್ಚಿ ಹಾಗೂ ಇನ್ನಿತರ ಸಾಧನಗಳನ್ನು ವಿತರಿಸಲಾಯಿತು.


ಭಾಗವಹಿಸಿದ್ದ ಆಸ್ಪತ್ರೆಗಳು: ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಶಂಕರ ಕಣ್ಣಿನ ಆಸ್ಪತ್ರೆ, ಪೂರ್ಣಸುಧಾ ಕ್ಯಾನ್ಸರ್ ಆಸ್ಪತ್ರೆ, ಮೈಸೂರು ಒಲಂಪಸ್ ಗ್ರೂಪ್ ಆಫ್ ಹಾಸ್ಪಿಟಲ್, ಭಾರತ್ ಕ್ಯಾನ್ಸರ್ ಆಸ್ಪತ್ರೆ, ನಾರಾಯಣ ನೇತ್ರಾಲಯ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ ಸೇರಿದಂತೆ 14ಕ್ಕೂ ಹೆಚ್ಚು ಆಸ್ಪತ್ರೆ ಸಹಭಾಗಿತ್ವದಲ್ಲಿ 200ಕ್ಕೂ ಹೆಚ್ಚು ವೈದ್ಯರು ಹಾಗೂ ಸಿಬ್ಬಂದಿ ಶಿಬಿರದಲ್ಲಿ ಭಾಗವಹಿಸಿದ್ದರು.


ಹರಿದುಬಂದ ಜನ ಸಾಗರ: ಇದೇ ಮೊದಲ ಬಾರಿಗೆ ಇಂತಹ ಬೃಹತ್ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಬಗ್ಗೆ ಒಂದು ವಾರದಿಂದಲೂ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಾಹನದ ಮೂಲಕ ಪ್ರಚಾರ ಮಾಡಲಾಗಿತ್ತು. ಜತೆಗೆ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಹಾಗಾಗಿ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಇದರಿಂದ ತಪಾಸಣೆಗಾಗಿ ಹೆಸರು ನೋಂದಾಯಿಸಿಕೊಳ್ಳಲು ಜನರು ಮುಗಿಬಿದ್ದರು.

ಈ ವೇಳೆ ಜನರನ್ನು ಸರತಿ ಸಾಲಿನಲ್ಲಿ ನಿಲ್ಲಿಸಲು ಪಕ್ಷದ ಕಾರ್ಯಕರ್ತರು ಹಾಗೂ ಪೊಲೀಸರು ಹರಸಾಹಸಪಟ್ಟರು. ಹೆಚ್ಚು ಆಸ್ಪತ್ರೆಗಳು ಭಾಗವಹಿಸಿದ್ದರಿಂದ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಜನಜಾತ್ರೆಯೇ ಹರಿದುಬಂತು. ಆಗಮಿಸಿದ್ದವರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿತ್ತು. ಶಿಬಿರದ ಆಯೋಜನೆಯ ಬಗ್ಗೆ ಜನರಿಂದ ಪ್ರಶಂಸೆಯ ಮಾತುಗಳು ವ್ಯಕ್ತವಾದವು.