ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾಜಿ ಸಚಿವ ಎಸ್.ಆರ್. ಮೋರೆ ಜನ್ಮದಿನ ಹಾಗೂ ಪುಣ್ಯಸ್ಮರಣೆ ನಿಮಿತ್ತ ಎಸ್.ಆರ್. ಮೋರೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಶಿವಲೀಲಾ ಪ್ರತಿಷ್ಠಾನ ಹಾಗೂ ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಡಿ. 9ರಂದು ಬೆಳಗ್ಗೆ 10 ಗಂಟೆಗೆ ರಾಜೀವಗಾಂಧಿನಗರದ ಎಸ್.ಆರ್. ಮೋರೆ ಸಮುದಾಯ ಭವನದಲ್ಲಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಕೀರ್ತಿ ಮೋರೆ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟ್ರಸ್ಟ್ ಉದ್ಘಾಟಿಸಲಿದ್ದು, ಮಾಜಿ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಅಜಯಸಿಂಗ್, ವಿಜಯಸಿಂಗ್, ಸಲೀಂ ಅಹ್ಮದ್, ಮಾಜಿ ಶಾಸಕಿ ಅಂಜಲಿ ನಿಂಬಾಳಕರ, ಶಿವಲೀಲಾ ಕುಲಕರ್ಣಿ ಆಗಮಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಶಿಬಿರದಲ್ಲಿ ಬಡ ಜನರಿಗೆ ಕಣ್ಣಿನ ತಪಾಸಣೆ, ಹೃದಯ ಸಂಬಂಧಿ ಕಾಯಿಲೆ, ಬಿಪಿ, ಸಕ್ಕರೆ ಕಾಯಿಲೆ, ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆ ಸೇರಿ ಇತರ ಕಾಯಿಲೆಗಳ ತಪಾಸಣೆ ನಡೆಸಲಾಗುವುದು. ಶಸ್ತ್ರ ಚಿಕಿತ್ಸೆ ಅವಶ್ಯವಿದ್ದವರಿಗೆ ಸಹ ಉಚಿತವಾಗಿ ಮಾಡಿಸಲಾಗುವುದು. ನುರಿತ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಜನರು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಶಾಂತಾ ಇರಕಲ್ಲ, ಡಾ. ಜಗದೀಶ, ಇತರರು ಇದ್ದರು.