ಜಿಲ್ಲೆ

ಆರೋಗ್ಯ ಕ್ಷೇತ್ರದಲ್ಲಿ ಎಐಗೆ ಸಿಗಲಿದೆ ಮಹತ್ವ

ಮೈಸೂರು: ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದುಕೊಳ್ಳಲಿದೆ ಎಂದು ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಹೇಳಿದರು.

ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶಗಳು ಮತ್ತು ಚರ್ಮರೋಗ ಶಾಸ್ತ್ರದಲ್ಲಿ ಅದರ ಪ್ರಸ್ತುತತೆಯ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ ಮುಂದೆ ರೋಗಿಗಳ ಆರೈಕೆಗೆ ಬಹಳ ಉಪಯುಕ್ತ. ಇತ್ತೀಚಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಚಿತ್ರಗಳನ್ನು ಓದುವ ಮತ್ತು ವಿಶ್ಲೇಷಿಸುವ ಗಮನಾರ್ಹ ಸಾಮರ್ಥ್ಯವನ್ನು ಪ್ರದರ್ಶಿಸಿವೆ. ರೋಗನಿರ್ಣಯದ ನಿಖರತೆ, ದಕ್ಷತೆಯನ್ನು ಹೆಚ್ಚಿಸುವ ಮತ್ತು ರೋಗನಿರ್ಣಯದ ದೋಷಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸಿದರು.

ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ. ಮಧು ಮಾತನಾಡಿ, ಕೃತಕ ಬುದ್ಧಿಮತ್ತೆಯನ್ನು ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಅಳವಡಿಸಿಕೊಳ್ಳುವುದರಿಂದ ರೋಗಿಯ ಆರೈಕೆಯ ವೆಚ್ಚವನ್ನು ತಗ್ಗಿಸಬಹುದು ಎಂದು ಅಭಿಪ್ರಾಯಪಟ್ಟರು.

ಮೈಸೂರು ಡರ್ಮಟಾಲಜಿ ಸೊಸೈಟಿ ಅಧ್ಯಕ್ಷ, ಜೆಎಸ್‌ಎಸ್ ಆಸ್ಪತ್ರೆಯ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ವೀರಣ್ಣ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಬಗ್ಗೆ ಹೆಚ್ಚು ಸಂಶೋಧನೆ ಮಾಡಿದರೆ ರೋಗಿಗಳಿಗೆ ಬಹಳ ಅನುಕೂಲವಾಗುವುದು ಎಂದರು.

ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವಾಣಿಶ್ರೀ ಅರುಣ್, ಜೆಎಸ್‌ಎಸ್ ಎಎಚ್‌ಇಆರ್‌ನ ಸಂಶೋಧನಾ (ಕ್ಲಿನಿಕಲ್) ಡೆಪ್ಯುಟಿ ಡೀನ್ ಡಾ. ವಿಕ್ರಮ್ ಪಾಟೀಲ್, ಮುಂಬೈನ ಕೊಲಾಬಾದ ಐಎನ್‌ಎಚ್‌ಎಸ್ ಅಶ್ವಿನಿ, ಆಸ್ಪತ್ರೆಯ ಚರ್ಮರೋಗ ತಜ್ಞ ಡಾ. ಸಿದ್ಧಾರ್ಥ್ ಭಟ್, ಬೆಂಗಳೂರಿನ ರಿವಾ ಸ್ಕಿನ್ ಹೇರ್ ಮತ್ತು ಸೌಂದರ್ಯ ಚಿಕಿತ್ಸಾಲಯದ ಸಲಹೆಗಾರ, ಚರ್ಮರೋಗ ತಜ್ಞ ಡಾ.ಪ್ರಿಯಾಂಕ ಕರಗಯ್ಯ, ತಿರುಚ್ಚಿಯ ಕೆಎಪಿವಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಪಾರ್ಥಸಾರಥಿ. ಚಂಡೀಗಡದ ಕಮಾಂಡ್ ಆಸ್ಪತ್ರೆಯ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಡಾ. ದೇಬ್ದೀಪ್ ಮಿತ್ರ ಅವರು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಅವರ ಜ್ಞಾನ ಮತ್ತು ಅನುಭವವನ್ನು ಹಂಚಿಕೊಂಡರು.

ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸುಮಾರು 165 ಪ್ರತಿನಿಧಿಗಳು ಭಾಗವಹಿಸಿದ್ದರು. ಸಾಹಿತ್ಯ, ಸಂಶೋಧನಾ ಕಲ್ಪನೆ, ಪ್ರಸ್ತಾವನೆ ಬರವಣಿಗೆ, ದತ್ತಾಂಶ ವಿಶ್ಲೇಷಣೆ ಮತ್ತು ಉಲ್ಲೇಖ ಬರವಣಿಗೆಗೆ ಬಳಸಬಹುದಾದ ವಿಭಿನ್ನ ಎಐ ಅಪ್ಲಿಕೇಶನ್‌ಗಳನ್ನು ಪ್ರತಿನಿಧಿಗಳಿಗೆ ಪರಿಚಯಿಸಲಾಯಿತು. ಡಾ.ಜಿ.ಆರ್.ಕಾಂತರಾಜ್, ಡಾ.ಎಸ್.ಅಶ್ವಿನಿ ಮತ್ತು ಆಸ್ಪತ್ರೆಯ ವೈದ್ಯರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  ಇತರರಿದ್ದರು.