ನಾಗಮಂಗಲ: ಪಟ್ಟಣದಲ್ಲಿರುವ 100 ಹಾಸಿಗೆಯ ತಾಲೂಕು ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯಲ್ಲಿಯೇ ತಾಯಿ ಮತ್ತು ಮಕ್ಕಳ ಆರೋಗ್ಯ ಕೇಂದ್ರವನ್ನು ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ 14 ವರ್ಷಗಳ ಹಿಂದೆ ನನ್ನ ಅವಧಿಯಲ್ಲಿ ನೀಡಲಾಗಿದ್ದ ಆಂಬುಲೆನ್ಸ್ ವಾಹನಗಳು ಬಿಟ್ಟರೆ ಇದುವರೆಗೂ ರೋಗಿಗಳಿಗೆ ಅಗತ್ಯವಿರುವ ಆಂಬುಲೆನ್ಸ್ ವಾಹನ ನೀಡದಿರುವುದು ಬೇಸರದ ಸಂಗತಿ. ಆದರೂ ಅಗತ್ಯ ಎಲ್ಲ ಸೌಲಭ್ಯಗಳುಳ್ಳ ನೂತನ ಮಾದರಿಯ ಆಂಬುಲೆನ್ಸ್ ವಾಹನದ ಸೌಕರ್ಯಕ್ಕೆ ಶೀಘ್ರವೇ ಕ್ರಮವಹಿಸಲಾಗುವುದು. ರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ವೈದ್ಯರು ಯಾವುದೇ ವೈಯಕ್ತಿಕ ಹಿತಾಸಕ್ತಿಯನ್ನಿಟ್ಟುಕೊಳ್ಳದೆ ಎಲ್ಲರೂ ಸಮನ್ವಯತೆಯಿಂದ ಜನಪರವಾಗಿ ಕರ್ತವ್ಯ ನಿರ್ವಹಿಸಬೇಕು. ಆಸ್ಪತೆಯ ಆವರಣದ ಸ್ವಚ್ಛತೆಗೆ ಮೊದಲ ಆದ್ಯತೆ ಇರಲಿ. ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ವಿಷಯದಲ್ಲಿ ಉದಾಸೀನತೆ ಬೇಡ. ಮರಣೊತ್ತರ ಪರೀಕ್ಷೆ ನಡೆಸಬಹುದಾದ ಶವಾಗಾರ ಕಟ್ಟಡದ ನವೀಕರಣಕ್ಕೆ ಅಗತ್ಯ ಕ್ರಮವಹಿಸುತ್ತೇನೆ.
ಶವಪರೀಕ್ಷೆಯ ಕೊಠಡಿಯ ಬಳಿ ಮರಣೋತ್ತರ ಪರೀಕ್ಷೆ ನಡೆಯುವವರೆಗೆ ಮೃತರ ಸಂಬಂಧಿಕರು ಕುಳಿತುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ಇಂತಹ ಗಂಭೀರ ಸಮಸ್ಯೆಯ ಪರಿಹಾರಕ್ಕಾಗಿ ಅಗತ್ಯ ಕ್ರಿಯಾಯೋಜನೆ ಮತ್ತು ನೀಲನಕ್ಷೆ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ತಹಸೀಲ್ದಾರ್ ನಯೀಂಉನ್ನಿಸಾ, ತಾಪಂ ಇಒ ಚಂದ್ರಮೌಳಿ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಸ್.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಸೇರಿದಂತೆ ಮತ್ತಿತರರಿದ್ದರು.
ತ್ರಿಚಕ್ರ ವಾಹನ ವಿತರಣೆ: ತಾಲೂಕಿನ ನಾಲ್ವರು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ತಾಲೂಕು ಪಂಚಾಯಿತಿ ಆವರಣದಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ವಿತರಿಸಿದರು. ತ್ರಿಚಕ್ರ ವಾಹನ ವಿತರಿಸಿ ಅಂಗವಿಕಲರ ಆರೋಗ್ಯ ವಿಚಾರಿಸಿ ಅವರ ಅಭಿವೃದ್ಧಿಗೆ ನಾನು ಕಟಿಬದ್ಧನಾಗಿದ್ದು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವೆ ನೀಡಿದರು. ವಾಹನ ಚಲಾಯಿಸುವಾಗ ಜಾಗರೂಕರಾಗಿ ಚಾಲನೆ ಮಾಡುವಂತೆ ಹಾಗೂ ರಸ್ತೆ ಸಂಚಾರ ನಿಯಮಗಳನ್ನು ಅಂಗವಿಕಲರು ಪಾಲಿಸುವಂತೆ ಕಿವಿಮಾತು ಹೇಳಿದರು.