ಚಿತ್ರದುರ್ಗ: ಪೊಲೀಸರು ಭಯ ಹಾಗೂ ಒತ್ತಡಗಳಿಂದ ಮುಕ್ತರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ನಿವೃತ್ತ ಎಆರ್‌ಎಸ್‌ಐ ಆರ್.ಟಿ. ರವಿಕುಮಾರ್ ಹೇಳಿದರು.
ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಮಾತನಾಡಿ, ಸೇವೆಗೆ ಸೇರುವಾಗಿರುವ ಸದೃಢ ದೇಹ,ಉತ್ತಮ ಆರೋಗ್ಯವನ್ನು ನಿವೃತ್ತಿ ನಂತರದಲ್ಲೂ ಕಾಪಾಡಿಕೊಳ್ಳಬೇಕು ಎಂದರು.
1991ರಲ್ಲಿ ನಾನು ಇಲಾಖೆಗೆ ಸೇವೆಗೆ ಸೇರಿದಂದಿನಿಂದ 39 ವರ್ಷಗಳ ಕಾಲ ಬದ್ಧತೆಯಿಂದ ಕರ್ತವ್ಯ ನಿರ್ವಹಿಸಿದ್ದೆ. ಕೆಲಸದ ಜತೆಗೆ ಆರೋಗ್ಯ ಮತ್ತು ಕುಟುಂಬದ ಬಗ್ಗೆ ಕಾಳಜಿ ವಹಿಸಬೇಕು. ಇಲಾಖೆ ಒದಗಿಸಿರುವ ಆರೋಗ್ಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ನಾನು ಸೇರಿ 2023-24ರಲ್ಲಿ 28ಕ್ಕೂ ಹೆಚ್ಚು ಅಧಿಕಾರಿ,ಸಿಬ್ಬಂದಿ ನಿವೃತ್ತರಾದೆವು. ಅವರೆಲ್ಲರನ್ನೂ ಗೌರವಿಸುತ್ತಿರುವುದು ಸಂತಸ ತಂದಿದೆ. ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ನನ್ನನ್ನು ಆಹ್ವಾನಿಸಿರುವುದಕ್ಕೆ ಇಲಾಖೆಗೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಎಸ್‌ಪಿ ಧರ್ಮೆಂದರ್‌ಕುಮಾರ್ ಮೀನಾ ವಾರ್ಷಿಕ ವರದಿ ವಾಚಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೂ ಆರೋಗ್ಯ ಭಾಗ್ಯ ಯೋಜನೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಯೋಜನೆಯಡಿ 550 ನಿವೃತ್ತ ಪೊಲೀಸರು ನೋಂದಣಿಯಾಗಿದ್ದಾರೆ ಎಂದರು.
ಕಳೆದ ವರ್ಷ 23 ನಿವೃತ್ತ ಸಿಬ್ಬಂದಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ 2.32 ಲಕ್ಷ ರೂ.ಪಾವತಿಸಲಾಗಿದೆ. ಶವ ಸಂಸ್ಕಾರಕ್ಕೆ 1.20 ಲಕ್ಷ ರೂ.ಭರಿಸಲಾಗಿದೆ. ಶೈಕ್ಷಣಿಕ ಯೋಜನೆಯಡಿ 111 ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ 14 ಲಕ್ಷ ರೂ.ನೆರವು, ಕನ್ನಡಕ ಖರೀದಿಗೆ 36 ಸಾವಿರ ರೂ. ಒದಗಿಸಲಾಗಿದೆ. ಪೊಲೀಸ್ ಕ್ಯಾಂಟೀನ್, ಪ್ರಾವಿಜನ್ ಹಾಗೂ ಮೆಡಿಕಲ್ ಸ್ಟೋರ್‌ಗಳನ್ನು ತೆರೆಯಲಾಗಿದೆ ಎಂದರು.
ಆರು ಪೊಲೀಸ್ ತಂಡಗಳ ಪಥ ಸಂಚಲನದ ನೇತೃತ್ವವನ್ನು ಡಿಎಆರ್ ಪಿ ಎಸ್‌ಐ ಎಸ್.ಎಸ್.ಯುವರಾಜ್ ವಹಿಸಿದ್ದರು.
ಡಿಸಿ ಟಿ. ವೆಂಕಟೇಶ್, ನಿವೃತ್ತ ಡಿಐಜಿ ಎಂ.ಎನ್. ನಾಗರಾಜ್, ಎಎಸ್‌ಪಿ ಎಸ್.ಜೆ. ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಟಿ. ಪಾಪಣ್ಣ ಇದ್ದರು. ಚಳ್ಳಕೆರೆ ಡಿವೈಎಸ್‌ಪಿ ರಾಜಣ್ಣ ವಂದಿಸಿದರು. ದಿನೇಶ್ ಮತ್ತು ಜೆ.ಅನಿತಾ ಕಾರ್ಯಕ್ರಮ ನಿರೂಪಿಸಿದರು.