ಮೈಸೂರು: ಮಹಾರಾಜ ಆಯುರ್ವೇದ ಆಸ್ಪತ್ರೆ ವತಿಯಿಂದ ವೈದ್ಯಕೀಯ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಜು.15, 22 ಮತ್ತು 29ರಂದು ಆಯೋಜಿಸಲಾಗಿದೆ.
ಕುವೆಂಪುನಗರದ ಗಾನಭಾರತಿ ಎದುರಿನ ಆರೋಗ್ಯಭಾರತಿ ಆವರಣದಲ್ಲಿರುವ ಆಸ್ಪತ್ರೆಯ ಹೊರರೋಗಿಗಳ ವಿಭಾಗದಲ್ಲಿ ಶಿಬಿರ ನಡೆಯಲಿದೆ. ಮೈಗ್ರೇನ್, ತಲೆನೋವು, ಉಬ್ಬಿರುವ ರಕ್ತನಾಳಗಳು, ಕಿವಿ, ಗಂಟಲು ಸಂಬಂಧಿಸಿದಂತೆ ತಪಾಸಣೆ ಮಾಡಲಾಗುತ್ತದೆ.
ಈ ದಿನಗಳಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೂ ಶಿಬಿರ ನಡೆಯಲಿದೆ. ಅವಶ್ಯಕತೆ ಇರುವ ಸಾರ್ವಜನಿಕರು ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಾಹಿತಿಗಾಗಿ 9164832253, 9743560009 ಸಂಪರ್ಕಿಸಬಹುದು ಎಂದು ಮಹಾರಾಜ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಯರಾಜ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ಮೈಸೂರು, ತಾಂಡವಪುರದಲ್ಲಿ ಎರಡು ಇಂಜಿನಿಯರಿಂಗ್ ಕಾಲೇಜು, 3 ಪದವಿ ಕಾಲೇಜು ಸೇರಿದಂತೆ ಹತ್ತಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ನಡೆಯುತ್ತಿವೆ.
ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೂ ಕಾರ್ಯವ್ಯಾಪ್ತಿ ವಿಸ್ತರಿಸುವ ಉದ್ದೇಶದಿಂದ ಮಹಾರಾಜ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಇದು ಕಳೆದ 3 ವರ್ಷದಿಂದ ಹಳೇ ಕೆಸರೆಯ ಎಂಐಟಿ ಬಿಇ ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿಗಾಗಿ ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದೆ. ಆಯುರ್ವೇದದ ವಿವಿಧ ಕ್ಷೇತ್ರದಲ್ಲಿನ 13 ತಜ್ಞ ವೈದ್ಯರ ತಂಡ ಆಸ್ಪತ್ರೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸಿ.ಶಿವಮೂರ್ತಿ, ನಿರ್ದೇಶಕ ಡಾ.ಸದಾನಂದ ಪರಗೊಂಡೆ, ಆಡಳಿತಾಧಿಕಾರಿ ಎ.ಎಂ.ಅನಿರುದ್ಧ ಇದ್ದರು.