ಜಿಲ್ಲೆ

ಆರೋಪಿತರಿಗೆ ನ್ಯಾಯಾಂಗ ಬಂಧನ

ಧಾರವಾಡ: ಜಿ.ಪಂ. ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಬೆಂಗಳೂರಿನ 6 ಸುಪಾರಿ ಹಂತಕರನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಿಗಿ ಭದ್ರತೆಯಲ್ಲಿ ಇಲ್ಲಿನ ಪ್ರಧಾನ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ವಿಜಯಲಕ್ಷ್ಮೀ ಘಾನಾಪುರ ಅವರು, ಆರೋಪಿಗಳನ್ನು ಮಾ. 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದ 6 ಆರೋಪಿಗಳನ್ನು ಮಾ. 2ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆಗೆ ಕಾಲಾವಕಾಶ ಕೋರಿದ್ದರಿಂದ ನ್ಯಾಯಾಲಯವು ಮಾ. 7ರವರೆಗೆ ಆರೋಪಿಗಳನ್ನು ಸಿಬಿಐ ವಶಕ್ಕೆ ನೀಡಿತ್ತು. ಆರೋಪಿಗಳ ಕಸ್ಟಡಿ ಅವಧಿ ಶನಿವಾರ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳಾದ ದಿನೇಶ, ಅಶ್ವತ್ಥ್, ಸುನೀಲಕುಮಾರ, ನಾಜೀರ ಅಹ್ಮದ, ಶಾನವಾಜ್ ಹಾಗೂ ನೂತನ್​ನನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಮಾ. 2ರಿಂದ 7ರವರೆಗಿನ ಕಸ್ಟಡಿ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಿಬಿಐ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಕೋರಲಿಲ್ಲ. ಹೀಗಾಗಿ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದರು.

ಆರೋಪಿಗಳನ್ನು ಉಪನಗರ ಠಾಣೆ ಪೊಲೀಸರ ಭದ್ರತೆಯಲ್ಲಿ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಯಿತು. ನಂತರ ಸಿಬಿಐ ಅಧಿಕಾರಿಗಳ ತಂಡ ಬೆಂಗಳೂರು ಹಾಗೂ ಇತರೆಡೆ ತೆರಳಿತು ಎಂದು ತಿಳಿದುಬಂದಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಸ್​ಆರ್​ಪಿ ಹಾಗೂ ಸಿಎಆರ್ ತುಕಡಿಯನ್ನು ನಿಯೋಜಿಸಲಾಗಿತ್ತು.

ತೀವ್ರ ವಿಚಾರಣೆ: ಸಿಬಿಐ ಅಧಿಕಾರಿಗಳು ಮಾ. 2ರಿಂದ 7ರವರೆಗೆ 6 ಆರೋಪಿಗಳನ್ನು ಧಾರವಾಡ, ದಾಂಡೇಲಿ ಹಾಗೂ ಕೆಲವು ಅಜ್ಞಾತ ಸ್ಥಳಗಳಿಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಹತ್ಯೆಗೆ ಸಂಬಂಧಿಸಿ ಆರೋಪಿಗಳಿಂದ ಹಲವು ಕುತೂಹಲಕಾರಿ ಅಂಶಗಳನ್ನು ಕಲೆ ಹಾಕಿದ್ದಾರೆ. ಅಗತ್ಯ ಬಿದ್ದರೆ ನ್ಯಾಯಾಲಯವನ್ನು ಕೋರಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.