ಹಿರೇಕೆರೂರ: ರಟ್ಟಿಹಳ್ಳಿ, ಹಿರೇಕೆರೂರ ತಾಲೂಕಿನಲ್ಲಿ ಕರೊನಾ ತಡೆಗಟ್ಟಲು ತಾಲೂಕು ಆಡಳಿತ, ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಮುಂಜಾಗ್ರತೆ ಕ್ರಮಗಳನ್ನು ಕೃಷಿ ಸಚಿವ ಬಿ.ಸಿ. ಪಾಟೀಲ ಶನಿವಾರ ಪರಿಶೀಲಿಸಿದರು.
ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್, ಸಿಪಿಐ ಮಂಜುನಾಥ ಪಂಡಿತ ಅವರೊಂದಿಗೆ ಎರಡು ತಾಲೂಕಿನ ಆರೋಗ್ಯ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಕೋಡ ಗ್ರಾಮದಲ್ಲಿನ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ಯಾವೊಬ್ಬ ವೈದ್ಯರು ಇಲ್ಲದ್ದರಿಂದ ಕೆಂಡಾಮಂಡಲವಾದ ಸಚಿವ ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಜೆಡ್.ಆರ್. ಮಕಾಂದಾರ, ವೈದ್ಯರಾದ ಡಾ. ರಾಕೇಶ ತಿಹಾರಿ ಹಾಗೂ ಡಾ. ಕಾಂಚನಾ ಅವರನ್ನು ಕೂಡಲೆ ಅಮಾನತುಗೊಳಿಸುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್ ಅವರಿಗೆ ಸೂಚಿಸಿದರು.
ಪಟ್ಟಣ, ತಾಲೂಕಿನ ಚಿಕ್ಕೇರೂರು, ಹಂಸಭಾವಿ ಮತ್ತು ರಟ್ಟಿಹಳ್ಳಿ ತಾಲೂಕಿನ ರಟ್ಟಿಹಳ್ಳಿ, ಮಾಸೂರು, ಹಳ್ಳೂರು ಆರೋಗ್ಯ ಕೇಂದ್ರದಲ್ಲಿನ ವೈದ್ಯಾಧಿಕಾರಿ, ವೈದ್ಯರು ಹಾಗೂ ಸಿಬ್ಬಂದಿ ಕಾರ್ಯವನ್ನು ಸಚಿವರು ಶ್ಲಾಘಿಸಿದರು.
ಜನಪ್ರತಿನಿಧಿಗಳಿಗೆ ಕ್ಷೇತ್ರದ ಅಭಿವೃದ್ಧಿ ಜತೆಗೆ ಸಾರ್ವಜನಿಕರ ಆರೋಗ್ಯ ಕಾಪಾಡುವುದು ಅಷ್ಟೇ ಮುಖ್ಯವಾಗಿರುತ್ತದೆ. ಕರೊನಾ ಪೀಡಿತರನ್ನು ಗುಣಪಡಿಸಲು ಇಲ್ಲಿಯವರೆಗೆ ನಿಖರ ಔಷಧ ಇಲ್ಲ. ಆದ್ದರಿಂದ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅನಿವಾರ್ಯತೆ ಇದ್ದರೆ ಮಾತ್ರ ಓಡಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ಕಾರ್ಯವೈಖರಿಗೆ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇನ್ನುಳಿದ ಗ್ರಾಮಗಳ ಆರೋಗ್ಯ ಕೇಂದ್ರಕ್ಕೆ ಒಮ್ಮೆ ಭೇಟಿ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
EndFragment