ಜಿಲ್ಲೆ

ಆರೋಗ್ಯ ರಕ್ಷಣೆಗೆ ಮಾಸ್ಕ್ ಕಡ್ಡಾಯ

ಕಲಘಟಗಿ: ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ತಹಸೀಲ್ದಾರ್ ಅಶೋಕ ಶಿಗ್ಗಾವಿ ಹೇಳಿದರು. ಪಪಂ ಆವರಣದಲ್ಲಿ ಗುರುವಾರ ಪಪಂ, ಪೊಲೀಸ್, ಕಂದಾಯ ಇಲಾಖೆ ಆಶ್ರಯದಲ್ಲಿ ಮಾಸ್ಕ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನಲ್ಲಿ ನಿಧಾನವಾಗಿ ಮಹಾಮಾರಿ ಕರೊನಾ ವಕ್ಕರಿಸಲು ಪ್ರಾರಂಭವಾಗಿದ್ದು, ಸಾರ್ವಜನಿಕರು ಮಾಸ್ಕ್, ಸ್ಯಾನಿಟೈಸರ್ ಬಳಕೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದಾಗಿ ನಮ್ಮ ಆರೋಗ್ಯಕ್ಕೆ ನಾವೇ ಕುತ್ತು ತಂದುಕೊಂಡಂತೆ ಆಗುತ್ತದೆ. ಜನರು, ವ್ಯಾಪಾರಸ್ಥರು, ಪ್ರಯಾಣಿಕರು ಕಡ್ಡಾಯವಾಗಿ ಜಿಲ್ಲಾಡಳಿತದ ಆದೇಶ, ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಿದರು. ಪಪಂದಿಂದ ಧ್ವನಿ ವರ್ಧಕ ಮೂಲಕ ಕೋವಿಡ್-19 ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಬಿತ್ತರಿಸಲಾಯಿತು. ಸಿಪಿಐ ವಿಜಯ ಬಿರಾದಾರ, ಪ.ಪಂ. ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ಪಪಂ ಸದಸ್ಯರು, ಕಂದಾಯ, ಪೊಲೀಸ್ ಇಲಾಖೆ, ಪೌರಕಾರ್ವಿುಕರು, ಸಿಬ್ಬಂದಿ ಇದ್ದರು.

ದೇವಿಕೊಪ್ಪ ಗ್ರಾಮದಲ್ಲಿ ಮಾಸ್ಕ್ ದಿನ ಆಚರಣೆ: ಕಲಘಟಗಿ ತಾಲೂಕಿನ ದೇವಿಕೊಪ್ಪದಲ್ಲಿ ಮಾಸ್ಕ್ ದಿನ ಆಚರಿಸಲಾಯಿತು. ತಾಪಂ ಸದಸ್ಯ ಬಸವರಾಜ ಬಾವಕರ, ಪಿಡಿಒ ಸಿ.ಎಸ್. ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಆಲದಮರದ, ಗುರುಸಿದ್ಧ ಟೋಂಗಳೆ, ಮುಖ್ಯೋಪಾಧ್ಯಾಯ ಕುಮಾರ ಕೆ.ಎಫ್., ವೈದ್ಯಾಧಿಕಾರಿ ರೇಚಿಕಾ ಹೊಂಬಳ, ಶೇಕಪ್ಪ ತುಂಬ್ರಿಕೊಪ್ಪ, ಶಿವಾನಂದ ಎಸ್.ಎಸ್., ಯಲ್ಲಪ್ಪ ವಾಲಿಕಾರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಪಂ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಜನಜಾಗೃತಿಗಾಗಿ ಮೆರವಣಿಗೆ: ಕರೊನಾ ತಡೆಗಟ್ಟಲು ಜನಜಾಗೃತಿಗಾಗಿ ನವಲಗುಂದ ತಾಲೂಕಾಡಳಿತದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗುರುವಾರ ಮಾಸ್ಕ್ ದಿನ ಆಚರಿಸಲಾಯಿತು. ತಹಸೀಲ್ದಾರ್ ಕಚೇರಿಯಿಂದ ಪುರಸಭೆ, ಬಸ್ ನಿಲ್ದಾಣ ಬಳಿ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ, ಶಂಕರ ಕಾಲೇಜ್, ವಿನಾಯಕ ಪೇಟೆ, ಗಾಂಧಿ ಮಾರ್ಕೆಟ್, ಲಿಂಗರಾಜ ಸರ್ಕಲ್ ಮತ್ತಿತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೋವಿಡ್-19 ತಡೆಯುವಂತೆ ಜನರಲ್ಲಿ ಅರಿವು ಮೂಡಿಸಲಾಯಿತು. ತಹಸೀಲ್ದಾರ್ ನವೀನ ಹುಲ್ಲೂರ ನೇತೃತ್ವ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಎನ್.ಕೆ. ಖುದಾವಂದ, ಸಿಪಿಐ ಚಂದ್ರಶೇಖರಯ್ಯ ಮಠಪತಿ, ಪಿಎಸ್​ಐ ಜಯಲಪಾಲ ಪಾಟೀಲ, ಪುರಸಭೆ ಜನಪ್ರತಿನಿಧಿಗಳು, ಪೊಲೀಸ್, ಶಿಕ್ಷಣ, ಲೋಕೋಪಯೋಗಿ, ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಜಾಗ್ರತೆ ವಹಿಸಿ: ಕೋವಿಡ್ ಸೋಂಕು ಹರಡದಂತೆ ಎಲ್ಲರೂ ಸ್ವಯಂ ಜಾಗ್ರತೆ ವಹಿಸಬೇಕು ಎಂದು ಅಳ್ನಾವರ ಪಪಂ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಹೇಳಿದರು. ಮಾಸ್ಕ್ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಲಾಕ್​ಡೌನ್ ಸಡಿಲಿಕೆ ನಂತರ ಸಾರ್ವಜನಿಕರು ತಮ್ಮ ನಿತ್ಯ ಚಟುವಟಿಕೆಯಲ್ಲಿ ಎಚ್ಚರಿಕೆ ವಹಿಸಿ ಆರೋಗ್ಯ ಸಂರಕ್ಷಣೆಗೆ ಸರ್ಕಾರ ನೀಡಿರುವ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳೀಯವಾಗಿ ಕೈಗೊಳ್ಳುವ ಕ್ರಮಗಳಿಗೆ ಸಹಕಾರ ನೀಡಬೇಕು ಎಂದರು. ತಹಸೀಲ್ದಾರ್ ಅಮರೇಶ ಪಮ್ಮಾರ, ಪಿಎಸ್​ಐ ಎಸ್.ಆರ್. ಕಣವಿ, ಪಪಂ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಇತರರಿದ್ದರು.

ಕರೊನಾ ಹೊಡೆದೋಡಿಸಿ: ಮಾಸ್ಕ್ ಧರಿಸಿ ಕರೊನಾ ಓಡಿಸಿ, ಪರಸ್ಪರ ಅಂತರ ಕಾಯ್ದುಕೊಂಡು ಎಲ್ಲರ ಆರೋಗ್ಯ ರಕ್ಷಿಸಿಕೊಳ್ಳೋಣ ಎಂದು ಕರೊನಾ ಜಾಗೃತಿ ಘೊಷಣೆ ಕೂಗುತ್ತ ಸಂಶಿ ಗ್ರಾಮಸ್ಥರಿಗೆ ಮಾಸ್ಕ್ ನೀಡಿ, ಕೈಗೆ ಸಾನಿಟೈಸರ್ ಹಾಕುವ ಮೂಲಕ ಗ್ರಾಪಂ ಗುರುವಾರ ಮಾಸ್ಕ್ ದಿನ ಆಚರಿಸಿತು. ಗ್ರಾ.ಪಂ. ಅಧ್ಯಕ್ಷ ಶೇಖರಪ್ಪ ಹರಕುಣಿ ಮಾತನಾಡಿ, ಕರೊನಾ ತಡೆಗಟ್ಟಲು ಮಾಸ್ಕ್ ಕಡ್ಡಾಯ. ಕರೊನಾದಿಂದ ಜನರನ್ನು ರಕ್ಷಿಸುವ ಸದುದ್ದೇಶದಿಂದ ಸರ್ಕಾರ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ ಎಂದರು. ಪಿಡಿಒ ವೈ.ಎಚ್. ಹೊಟ್ಟಿಗೌಡರ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಫಾತೀಮಾ ಕಣವಿ, ಮಾಜಿ ಅಧ್ಯಕ್ಷ ಯಲ್ಲಪ್ಪಗೌಡ ಪಾಟೀಲ, ಸದಸ್ಯರಾದ ಪ್ರಕಾಶಗೌಡ ಪಾಟೀಲ, ಮುದಕಣ್ಣ ಅಗಡಿ, ಭರಮಗೌಡ ಶಿರೂರ, ಶಂಕ್ರಪ್ಪ ಮಡ್ಲಿ, ಫಕೀರಗೌಡ ಬಳಗಾನೂರ, ಉಪ ತಹಸೀಲ್ದಾರ್ ಎಂ.ಸಿ. ಮಾಳಪ್ಪಗೌಡ್ರ, ಗ್ರಾಮಲೆಕ್ಕಾಧಿಕಾರಿ ಶಿವಾನಂದ ಕರಿಗೇರ, ಗ್ರಾಪಂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ, ಕಂದಾಯ ಇಲಾಖೆ, ಗ್ರಾಪಂ ಸಿಬ್ಬಂದಿ ಪಾಲ್ಗೊಂಡಿದ್ದರು.