ಜಿಲ್ಲೆ

ಆರು ಜನ ನಿವೃತ್ತ ಸರ್ಕಾರಿ ವಾಹನ ಚಾಲಕರಿಗೆ ಸನ್ಮಾನ

ಹಾಸನ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಗೊಂಡ ಆರು ಜನ ಸರ್ಕಾರಿ ವಾಹನ ಚಾಲಕರನ್ನು ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವಾಹನ ಚಾಲಕರ ಸಂಘದ ಜಿಲ್ಲಾ ಅಧ್ಯಕ್ಷ ಜೆ. ಶಿವಾನಂದ್ ನೇತೃತ್ವದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ ಅವರು ಸನ್ಮಾನಿಸಿ ಗೌರವಿಸಿದರು.
ಇದೆ ವೇಳೆ ಸುದ್ದಿಗಾರರೊಂದಿಗೆ ಈ. ಕೃಷ್ಣೇಗೌಡ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಒಟ್ಟು 24 ಸಾವಿರ ಜನ ಸರ್ಕಾರಿ ನೌಕರರಿದ್ದಾರೆ. ಇವರಲ್ಲಿ ವಾಹನ ಚಾಲಕರಾಗಿ 6 ಜನರು ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಹಿನ್ನಲೆಯಲ್ಲಿ ಅವರಿಗೆ ವಾಹನ ಚಾಲಕರ ಸಂಘದಿಂದ ಸನ್ಮಾನ ಮಾಡಲಾಗಿದೆ. ತಮ್ಮ ಸೇವಾವಧಿಯಲ್ಲಿ ಸರ್ಕಾರಿ ಅಧಿಕಾರಿಗಳೊಂದಿಗೆ ಕಾರ್ಯದಕ್ಷತೆಯೊಂದಿಗೆ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಗೊಂಡ ವಾಹನ ಚಾಲಕರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸಿದರು.
ವಾಹನ ಚಾಲಕರಿಗೆ ಹಲವಾರು ಕಷ್ಟಗಳಿವೆ. ಅವರ ಕಷ್ಟಗಳಿಗೆ ಸ್ಪಂದಿಸಲು ಸರ್ಕಾರ ಮತ್ತು ಸರ್ಕಾರಿ ನೌಕರರ ಸಂಘ ಸದಾ ಅವರ ಜತೆ ಇರುತ್ತದೆ. ವಾಹನ ಚಾಲಕರ ಸಂಘಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾದರಿಯಾಗಿ ಸಂಘಟನೆ ಮಾಡಿಕೊಂಡು ಬರುತ್ತಿದೆ. ಯಾವಾಗಲು ನಿಮ್ಮ ಜತೆ ಸಂಘ ಇರುವುದಾಗಿ ಹೇಳಿದರು.
ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ ರಮೇಶ್, ಕಂದಾಯ ಇಲಾಖೆಯ ಎಂ.ಎನ್. ಬಸಪ್ಪ, ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ಹೊಳೆನರಸೀಪುರದ ರಂಗನಾಥ್, ಡಿಎಚ್‌ಒ ಆರೋಗ್ಯ ನಿರ್ದೇಶಕರ ಚಾಲಕರಾಗಿದ್ದ ದಿಗಂಬರ ಗೌಡ, ಅರಸೀಕೆರೆ ಆರೋಗ್ಯ ಇಲಾಖೆಯಲ್ಲಿ ವಾಹನ ಚಾಲಕರಾಗಿದ್ದ ಎಚ್.ಎಸ್. ಪಂಚಾಕ್ಷರಿ ಅವರನ್ನು ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು.