ಅರಸೀಕೆರೆ: ತಾಲೂಕಿನ ಸಂಕೋಡನಹಳ್ಳಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಮೂರು ದಿನ ಹಮ್ಮಿಕೊಂಡಿದ್ದ ಆರತಿಬಾನ ಮಹೋತ್ಸವಕ್ಕೆ ಶನಿವಾರ ತಡರಾತ್ರಿ ತೆರೆ ಬಿದ್ದಿತು.
ಕಳೆದ 20 ವರ್ಷಗಳಿಂದ ಊರಿಗೆ ಯಾವುದೇ ಸಂಕಷ್ಟ ಎದುರಾಗದಿರಲಿ ಎನ್ನುವ ಸಂಕಲ್ಪ ಹೊತ್ತ ಯುವಕರ ತಂಡ ಮಹೋತ್ಸವ ಹಮ್ಮಿಕೊಂಡುಬರುತ್ತಿದೆ. ಯುವತಿಯರು, ಗೃಹಿಣಿಯರು ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿ, ಶ್ರೀರಂಗನಾಥ ಸ್ವಾಮಿ, ಹೊಂಗ್ಯಮ್ಮ, ಮಲ್ಲಿಗೆಮ್ಮ, ಚಲುವರಾಯ, ಧೂತರಾಯ, ಕೆಂಚಪ್ಪ, ಶ್ರೀಕಾಲಭೈರವೇಶ್ವರ ಸ್ವಾಮಿಗೆ ಎಳ್ಳು, ಅಕ್ಕಿ ಹಿಟ್ಟಿನ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.
ಚಲುವರಾಯ ಹಾಗೂ ಧೂತರಾಯ ಸ್ವಾಮಿ ಕುಣಿತ ನೋಡಗರ ಮನಸೂರೆಗೊಂಡಿತು. ಯಾದಾಪುರ, ಮಲ್ಲೇನಹಳ್ಳಿ, ಭೈರಾಂಬುಧಿ, ಚಿಕ್ಕೂರು, ಕಲ್ಲನಾಯ್ಕನಹಳ್ಳಿ, ಕಾಟೀಕೆರೆ, ಕಾಳನಕೊಪ್ಪಲು, ಮುದ್ದರಂಗನಹಳ್ಳಿ, ಜವನಹಳ್ಳಿ, ಜಾಜೂರು ಸೇರಿ ಹತ್ತಾರು ಹಳ್ಳಿಗಳಿಂದ ಆಗಮಿಸಿದ್ದ ಸಹಸ್ರಾರು ಜನರಿಗೆ ಗ್ರಾಮಸ್ಥರ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.