ಜಿಲ್ಲೆ

ಆರೋಗ್ಯಕರ ತೈಲದ ಮಾಹಿತಿ ನೀಡಿದ ಡಾ. ಸತ್ತೂರ

ಹುಬ್ಬಳ್ಳಿ: ಮುಂಬೈನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 3ನೇ ಅಂತಾರಾಷ್ಟ್ರೀಯ ಹೃದಯ-ಮಧುಮೇಹ’ ಸಮ್ಮೇಳನದಲ್ಲಿ ಹುಬ್ಬಳ್ಳಿಯ ಹೃದ್ರೋಗ ಹಾಗೂ ಮಧುಮೇಹ ತಜ್ಞ ಡಾ. ಜಿ.ಬಿ. ಸತ್ತೂರ ಅವರು ಸಕ್ರಿಯವಾಗಿ ಭಾಗವಹಿಸಿ, ಹೃದಯ, ಮಿದುಳು ಹಾಗೂ ಇನ್ನಿತರ ಅವಯವಗಳಿಗೆ ಸಹಾಯಕವಾಗುವ ಖಾದ್ಯ ತೈಲಗಳ ಬಗಗೆ ವಿವರವಾದ ಮಾಹಿತಿ ನೀಡಿದರು.
ಸಾಸಿವೆ ಎಣ್ಣೆ, ಶೇಂಗಾ ಎಣ್ಣೆ, ಆಲಿವ್ ಎಣ್ಣೆ, ಕರೊಲಾ ಎಣ್ಣೆ, ರೈಸ್ ಬ್ರಾನ್ ಎಣ್ಣೆ ಮತ್ತು ಎಳ್ಳೆಣ್ಣೆ ಉತ್ತಮ ಖಾದ್ಯ ತೈಲಗಳು. ಆರೋಗ್ಯಕರ ತೈಲವು ಅದರಲ್ಲಿರುವ ಅಪರ್ಯಾಪ್ತ (ಅನ್‌ಸಾಚುರೇಟೆಡ್) ಕೊಬ್ಬಿನ ಆಮ್ಲಗಳಾದ ‘ಮೊನೊ’ ಮತ್ತು ‘ಪಾಲಿ’ ಎಂಬವುಗಳ ಪ್ರಮಾಣವನ್ನು ಅವಲಂಬಿಸಿದೆ. ಕೊಬ್ಬರಿ ಎಣ್ಣೆಯನ್ನು ಮಿತವಾಗಿ ಬಳಸಬುದು. ಪ್ರತಿಯೊಬ್ಬರಿಗೂ ದಿನಾಲು 3 ಚಮಚ (15 ಎಂಎಲ್) ಎಣ್ಣೆ ಬೇಕು. 1 ಚಮಚ ತುಪ್ಪವು ಹಾನಿಕಾರಕವಲ್ಲದಿದ್ದರೂ ಅದನ್ನು ಪರಿಚಿತ ಮೂಲಗಳಿಂದ ತಂದಲ್ಲಿ ಮಾತ್ರ ಸೇವಿಸಬಹುದು. ಪ್ರತಿ ಅಡಿಗೆ ಮನೆ ಅಥವಾ ಹೋಟೆಲ್‌ಗಳಲ್ಲಿ ಪ್ರತಿ ದಿನ 2ರಿಂದ 3 ತರಹದ ತೈಲಗಳನ್ನ ಉಪಯೋಗಿಸುವುದು ಉತ್ತಮ. ಉದಾಹರಣೆಗೆ ಶೇಂಗಾ ಎಣ್ಣೆಯನ್ನು ಪಲ್ಯೆ ಮಾಡಲು, ಸಾಸಿವೆ ಎಣ್ಣೆ ಕರಿಯಲು ಮತ್ತು ಆಲಿವ್ ಎಣ್ಣೆಯನ್ನು ಕಚ್ಚಾ ತರಕಾರಿ (ಸಾಲಡ್) ಮೇಲೆ ದಿನಾಲೂ ಸಿಂಚಿಸಲು ಉಪಯೋಗಿಸಬಹುದು. ಇದರಿಂದ ದಿನಾಲೂ ಉತ್ತಮ ಆಮ್ಲಗಳ ಮಿಶ್ರಣವು ದೊರಕುವುದು. ಗಾಣದ ಎಣ್ಣೆಯು (ಕೋಲ್ಡ್-ಪ್ರೆಸ್ಡ್ ಆಯಿಲ್) ‘ರಿಫೈನ್ಸ್ ಎಣ್ಣೆ’ಗಿಂತ ಉತ್ತಮ. ನಿಮ್ಮ ಊರಿನಲ್ಲಿಯೇ ಗಾಣದ ಎಣ್ಣೆ ವಿಪುಲವಾಗಿ ದೊರಕುತ್ತದೆ. ಇತ್ತೀಚೆಗೆ ರಿಫೈನ್ಡ್ ಎಣ್ಣೆಯನ್ನು ಕೂಡ ಭಾರತ ಸರ್ಕಾರವು ಸಾಕಷ್ಟು ನಿರ್ಬಂಧಗಳನ್ನು ನೀಡಿ ಸುಧಾರಣೆಗೊಳಿಸಿದೆ.
ಒಮ್ಮೆ ಉಪಯೋಗಿಸಿದ ಎಣ್ಣೆಯನ್ನು ಮತ್ತೊಮ್ಮೆ ಉಪಯೋಗಿಸುವುದು ಹೃದಯಾಘಾತ, ಪಾರ್ಶ್ವವಾಯುವಿಗೆ ಹಾದಿ. ಹೊಸ ಎಣ್ಣೆಯನ್ನು ಹಳೆಯ ಎಣ್ಣೆಗೆ ಕೂಡಿಸಿ ಉಪಯೋಗಿಸುವ ಪದ್ಧತಿಯೂ ಕೂಡ ಹಾನಿಕಾರವೇ, ಇದು ಭಾರತದಲ್ಲಿ ಪ್ರಚಲಿತ !
ವೈದ್ಯಕೀಯ ಸಂಸ್ಥೆಗಳಾದ ಭಾರತೀಯ ಕೊಬ್ಬು ಸಂಸ್ಥೆ, ಭಾರತೀಯ ಹೃದಯ ಸಂಸ್ಥೆಗಳು ಮುಂತಾದವು ಈ ಎಣ್ಣೆಗಳನ್ನು ಶಿಫಾರಸು ಮಾಡುತ್ತದೆಂದು ಡಾ. ಸತ್ತೂರ ಅವರು ತಿಳಿಸಿದರು.
2 ದಿನದ ಈ ಸಮ್ಮೇಳನದಲ್ಲಿ ದೇ-ವಿದೇಶದಿಂದ 300ಕ್ಕೂ ಹೆಚ್ಚು ವೈದ್ಯರು ಪಾಲ್ಗೊಂಡಿದ್ದರು.