ಜಿಲ್ಲೆ

ಆರಗ ಜ್ಞಾನೇಂದ್ರ ವಿರುದ್ಧ ದಸಂಸ ಪ್ರತಿಭಟನೆ

ಶ್ರೀರಂಗಪಟ್ಟಣ: ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ನೀಡಿರುವ ಹೇಳಿಕೆ ಖಂಡಿಸಿ ದಸಂಸ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.


ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಒಕ್ಕೂಟ ಸೇರಿದಂತೆ ಹಲವು ದಲಿತ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಜಮಾವಣೆಗೊಂಡು ಬಿಜೆಪಿ ಪಕ್ಷ ಹಾಗೂ ಮಾಜಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ರಾಜ್ಯದಲ್ಲಿ ಈ ಹಿಂದೆ ಗೃಹಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಆರಗ ಜ್ಞಾನೇಂದ್ರ ಖರ್ಗೆಯವರಂತಹ ಓರ್ವ ಹಿರಿಯ ಮುತ್ಸದ್ದಿ ರಾಜಕಾರಣಿಯ ಮೈಬಣ್ಣದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅವರೊಳಗಿನ ವರ್ಣಭೇದ ನೀತಿ ಮತ್ತು ಬಿಜೆಪಿ ಪಕ್ಷದ ಮನುವಾದ ನಡೆಯನ್ನು ಬಿಂಬಿಸುತ್ತಿದೆ. ಇವರಲ್ಲಿನ ಜಾತೀಯತೆ ಹಾಗೂ ದಲಿತರನ್ನು ಕಡೆಗಣಿಸುವ ಧಮನಕಾರಿ ಮನಸ್ಥಿತಿಯನ್ನು ತೋರ್ಪಡಿಸಿದೆ. ಬಿಜೆಪಿ ಪಕ್ಷ ತಕ್ಷಣ ಇಂತಹ ರಾಜಕಾರಣಿಯನ್ನು ಪಕ್ಷದಿಂದ ಕಿತ್ತೊಗೆಯಬೇಕು ಹಾಗೂ ಆರಗ ಜ್ಞಾನೇಂದ್ರ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ದೇಶದ ಪ್ರಮುಖ ಮುಂಖಂಡರಾಗಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ತಕ್ಷಣ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಶಿರಸ್ತೇದಾರ್ ಪ್ರಸನ್ನ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಿದರು.


ದಸಂಸ ಮುಖಂಡರಾದ ಬಾಬುರಾಯನಕೊಪ್ಪಲು ರಮೇಶ್, ಚಂದ್ರಶೇಖರ್, ಗಂಜಾಂ ಹೊನ್ನಪ್ಪ, ವಡಿಯಾಂಡಹಳ್ಳಿ ಗೋವಿದರಾಜು, ಲಾಲಿಪಾಳ್ಯ ಶಂಕರ್, ಕಡತನಾಳು ಮಾದೇಶ, ನಾಗರಾಜು ಇತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.