ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ನಂಜನಗೂಡಿನಲ್ಲಿ ಪ್ರಗತಿಪರ ಚಳವಳಿಗಾರರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಲ್ಲಹಳ್ಳಿ ನಾರಾಯಣ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ ಇತರರು ಇದ್ದರು. 
ಜಿಲ್ಲೆ

ಆರಗ ಜ್ಞಾನೇಂದ್ರ ಗಡಿಪಾರಿಗೆ ಆಗ್ರಹ

ನಂಜನಗೂಡು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರನ್ನು ಎಸ್ಸಿ, ಎಸ್ಟಿ ಅಸ್ಪಶ್ಯತಾ ಕಾಯ್ದೆಯಡಿ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಪ್ರಗತಿಪರ ಚಳವಳಿಗಾರರ ವೇದಿಕೆಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಧರಣಿ ನಡೆಸಿದ ಕಾರ್ಯಕರ್ತರು, ಮಾಜಿ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ಕುರಿತು ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಅರಗ ಜ್ಞಾನೇಂದ್ರ ತಮ್ಮ ಅನಾರೋಗ್ಯಕರ ಮನಸ್ಥಿತಿಯನ್ನು ಜನರ ಮುಂದೆ ಹೊರಹಾಕಿದ್ದಾರೆ. ಹಿರಿಯ ರಾಜಕಾರಣಿಯನ್ನು ತೇಜೋವಧೆ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಕೆಲವರು ದಲಿತ ಸಮುದಾಯಕ್ಕೆ ಸೇರಿದ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಲಘುವಾಗಿ ಮಾತನಾಡುವ ಮೂಲಕ ದಲಿತರ ಸ್ವಾಭಿಮಾನವನ್ನು ಕೆಣಕುತ್ತಿದ್ದಾರೆ. ಹೀಗಾಗಿ ಅವಹೇಳನಕಾರಿಯಾಗಿ ಮಾತನಾಡುವವರ ಮೇಲೆ ತಕ್ಷಣ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ ಬಳಸಲು ಮುಂದಾಗಿರುವುದು ಸರಿಯಲ್ಲ. ಪ್ರಸಕ್ತ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಸಿ ಹಾಗೂ ಎಸ್ಟಿ ಸಮುದಾಯದ ಶೇ.90ಕ್ಕೂ ಹೆಚ್ಚು ಪ್ರಮಾಣದ ಜನರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಅವರೆಲ್ಲರ ಆಶಯದಂತೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳಿಗೆ ಮೀಸಲಿಟ್ಟಿರುವ ಹಣವನ್ನು ಜನರ ಅಭಿವೃದ್ಧಿಗೆ ಮೀಸಲಿರಿಸುವಂತೆ ಆಗ್ರಹಿಸಿದರು.

ದಸಂಸ ಜಿಲ್ಲಾ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ್, ಚುಂಚನಹಳ್ಳಿ ಮಲ್ಲೇಶ್, ಕಾರ್ಯ ಬಸವಣ್ಣ, ಬೊಕ್ಕಹಳ್ಳಿ ಮಹದೇವಸ್ವಾಮಿ, ದೇವರಸನಹಳ್ಳಿ ಪುಟ್ಟಸ್ವಾಮಿ, ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಮುಳ್ಳೂರು ಸ್ವಾಮಿ, ಹರದನಹಳ್ಳಿ ರಾಜೇಶ್, ಕಳಲೆ ಕುಮಾರ್, ಶಂಕರಪುರ ಸಿದ್ಧರಾಜು, ಮಹದೇವಕುಮಾರ್, ಬಸವರಾಜು, ರಂಗಸ್ವಾಮಿ, ಸಂದೀಪ್, ಹೂವಯ್ಯ, ನಾರಾಯಣ ಸ್ವಾಮಿ, ಹುಲ್ಲಹಳ್ಳಿ ಮರಿಸ್ವಾಮಿ ಇತರರು ಇದ್ದರು.