ಚಾಮರಾಜನಗರ: ಮಕ್ಕಳ ಆರಂಭಿಕ ಬೆಳವಣಿಗೆ ಹಂತದಲ್ಲಿ ಶ್ರವಣದೋಷವನ್ನು ಪತ್ತೆಹಚ್ಚಿ ವೈದ್ಯಕೀಯ ಪರಿಹಾರ ಪಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಉಪನ್ಯಾಸ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ರೆಡ್ ಕ್ರಾಸ್ ಸೊಸೈಟಿ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ 10 ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳಿಗೆ ಶ್ರವಣಯಂತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರವಣದೋಷವುಳ್ಳ ಮಕ್ಕಳ ಬೆಳವಣಿಗೆ ಹಂತದಲ್ಲಿ ಕಿವಿ ಕೇಳಿಸದಿದ್ದರೆ ಮುಂದೆ ಮಾತನಾಡುವುದನ್ನು ಕಲಿಯಲು ಸಹ ಕಷ್ಟವಾಗಲಿದೆ. ಮಕ್ಕಳಿಗೆ ಶ್ರವಣಯಂತ್ರದ ಬಳಕೆ, ಕಿವಿಗೆ ಅಳವಡಿಕೆ, ಚಾರ್ಜಿಂಗ್ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಈ ನಿಟ್ಟಿನಲ್ಲಿ ಪಾಲಕರು ಶ್ರವಣಯಂತ್ರದ ಬಳಕೆ ಕುರಿತು ಮಕ್ಕಳಿಗೆ ತಿಳಿಹೇಳಬೇಕು. ಪಾಲಕರು ಕೂಡ ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳ ಶ್ರವಣ ವೈಕಲ್ಯತೆಯನ್ನು ಪತ್ತೆಹಚ್ಚಿ ವೈದ್ಯಕೀಯ ನೆರವು ಪಡೆಯಬೇಕು ಎಂದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಜಿ.ಎಂ.ಸಂಜೀವ್ ಮಾತನಾಡಿ, ಹಿಂದಿನ ಕಾಲದಲ್ಲಿ ಅಂಗವೈಕಲ್ಯತೆಯನ್ನು ಬಗೆಹರಿಸಿಕೊಳ್ಳಲು ಅಗತ್ಯ ತಂತ್ರಜ್ಞಾನ ಇರಲಿಲ್ಲ. ಈಗ ವೈಜ್ಞಾನಿಕತೆ ಮುಂದುವರಿದಿದ್ದು, ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಇದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.
ಯಾವ ಮಗುವೂ ಶ್ರವಣದೋಷದಿಂದ ಬಳಲಬಾರದೆಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ. ಶ್ರವಣದೋಷವುಳ್ಳ ಮಕ್ಕಳನ್ನು ಪತ್ತೆಹಚ್ಚಿ ಅಗತ್ಯ ಸೌಲಭ್ಯ ಪಡೆಯಲು ಸಂಬಂಧಪಟ್ಟ ಇಲಾಖೆಗಳು ಜವಾಬ್ದಾರಿವಹಿಸಬೇಕು.