ಜಿಲ್ಲೆ

ಆರಂಭದ ಮುಂಗಾರಿನ ಅಬ್ಬರಕ್ಕೆ ಹಾಸನ ಜಿಲ್ಲೆ ತತ್ತರ

Hassan - Ramesh H R

ಹಾಸನ: ಹಾಸನ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ ಮುಂದುವರಿದಿದೆ. ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ. ಹತ್ತಾರು ಮನೆಗಳು ಕುಸಿದು ಸಾಕಷ್ಟು ಸಾಕಷ್ಟು ಅವಾಂತರ ಸೃಷ್ಟಿಸಿದೆ. ಇದರ ಜತೆಗೆ ಸಕಲೇಶಪುರ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯ 75ರ ಕೊಲ್ಲಹಳ್ಳಿ ಗ್ರಾಮದಿಂದ ದೊಡ್ಡತಪ್ಪಲೆ ಗ್ರಾಮದವರೆಗೆ ಆರಂಭದಲ್ಲಿಯೇ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆಯಾದರೆ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತದ ಆತಂಕ ಎದುರಾಗಿದೆ.

ಕಳೆದ ವರ್ಷ ದೊಡ್ಡತಪ್ಪಲೆಯಲ್ಲಿ ಭಾರೀ ಭೂ ಕುಸಿತ ಸಂಭವಿಸಿತ್ತು. ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಸ್ಥಳಕ್ಕೆ ತೆರಳಿ ತಡೆಗೋಡೆ ನಿರ್ಮಿಸುವುದಾಗಿ ಹೇಳಿದ್ದರು. ಅದರಂತೆ ತಡೆಗೋಡೆಯನ್ನೇನೊ ಮಾಡಲಾಗಿದೆ. ಆದರೆ ಅವುಗಳು ಭೂ ಕುಸಿತವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗುವುದಿಲ್ಲ ಎಂಬುದಕ್ಕೆ ಈಗ ಮತ್ತೆ ಭೂ ಕುಸಿತವಾಗಿರುವುದೇ ಸಾಕ್ಷಿಯಾಗಿದೆ.

ಈಗಾಗಲೇ ಪೂರ್ವ ಮುಂಗಾರು ಅಬ್ಬರಕ್ಕೆ ಜಿಲ್ಲೆಯಲ್ಲಿ ಸಾಕಷ್ಟು ಮನೆಗಳು ಕುಸಿದಿವೆ. ಇನ್ನು ಮುಂದಿನ ದಿನಗಳಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಹೆಚ್ಚು ಮಳೆ ಸುರಿದರೆ ನೂರಾರು ಮನೆಗಳು ಕುಸಿಯುವ ಭೀತಿ ಸಹ ಎದುರಾಗಿದೆ. ಇದರ ಜತೆಗೆ ಸಾವಿರಾರು ಮರಗಳು ಸಹ ಧರಶಾಯಿಯಾಗಲಿವೆ.

ಮಳೆ ರೈತರಿಗೆ ವರವಾದರೂ ಕೂಡ ಅಗತ್ಯಕ್ಕಿಂತ ಹೆಚ್ಚಿನ ಮಳೆಯಾದರೆ ಅದು ಶಾಪವೇ ಆಗಲಿದೆ. ಅಗತ್ಯಕ್ಕೆ ಹೆಚ್ಚಿನ ಮಳೆ ಸುರಿದರೆ ಭತ್ತ ಹೊರತುಪಡಿಸಿ ಯಾವುದೇ ಬೆಳೆಯನ್ನು ಸಹ ರೈತರು ಬೆಳೆಯಲಾಗುವುದಿಲ್ಲ. ಹೀಗಾಗಿ ನೆರೆ ಪರಿಸ್ಥಿತಿ ಉಂಟಾಗದಿರಲಿ ಎಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿ ನದಿ ಮೈ ದುಂಬಿ ಹರಿಯುತ್ತಿದೆ. ನಿರಂತರ ಮಳೆಯಿಂದ ಸಕಲೇಶಪುರ ಪಟ್ಟಣದಲ್ಲಿ ಹರಿಯುವ ಹೇಮಾವತಿ ನದಿಗೆ ಮಲೆನಾಡ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಒಳಹರಿವು ಹೆಚ್ಚಾಗಿದೆ. ಈ ಬಾರಿ ಮೇ ತಿಂಗಳಿನಲ್ಲೇ ಹೇಮಾವತಿ ನದಿಗೆ ಹೆಚ್ಚಿನ ಒಳಹರಿವಾಗಿದೆ. ಇದರಿಂದ ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಂದೇ ದಿನಕ್ಕೆ ಕಳೆದ ಮೂರು ದಿನಗಳಿಂದ 10 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬರುತ್ತಿದೆ. ಮಂಗಳವಾರಕ್ಕೆ ಜಲಾಶಯಕ್ಕೆ 17,812 ಕ್ಯುಸೆಕ್ ನೀರು ಹರಿದು ಬಂದಿದೆ. 37 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತರ 20.881 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಕೇವಲ 9.834 ಟಿಎಂಸಿ ನೀರು ಸಂಗ್ರಹವಾಗಿತ್ತು. ಈಗಾಗಲೇ ಬೇಲೂರಿನ ಯಗಚಿ ಜಲಾಶಯ ತುಂಬಿ ಡ್ಯಾಮ್‌ನಿಂದ ನೀರನ್ನು ಹರಿಬಿಡಲಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಹೇಮಾವತಿ ಜಲಾಶಯ ಕೂಡ ಬಹುತೇಕ ಭರ್ತಿಯಾಗಲಿದೆ.

ಮಳೆಯಿಂದ ಆಗಬಹುದಾದ ಅನಾಹುತ ತಡೆಗಟ್ಟುವ ಸಂಬಂಧ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿ ರಕ್ಷಣಾ ಕಾರ್ಯಾಚರಣೆಗೆ ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.