ಜಿಲ್ಲೆ

ಆಯೋಗದ ಅಧಿಕಾರಿಗಳ ವಿರುದ್ಧ ಆಕ್ರೋಶ

ಚಿತ್ರದುರ್ಗ: ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘಿಸಿ ಈಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಏಜೆಂಟರು, ಕಾರ್ಯರ್ತರ ಮೂಲಕ ಮತದಾರರಿಗೆ ಹಣ ಹಂಚುವ ಮೂಲಕ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ವಿ.ಭೂತರಾಜ್ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಮತಗಳನ್ನು ಖರೀದಿಸಲಾಗಿದೆ. ಹಣ ಹಂಚಿಕೆಯ ಕುರಿತಂತೆ ಸೂಕ್ತ ಸಾಕ್ಷೃಧಾರಗಳೊಂದಿಗೆ ನಾನು ಮತ್ತು ಚಿತ್ರದುರ್ಗದ ಚಾರ್ವಾಕ ಅಸೋಸಿಯೇಷನ್ಸ್ ಜಂಟಿಯಾಗಿ ಮೇ 10ರಂದು ದೂರು ನೀಡಿ ತನಿಖೆಗೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಿದ್ದಾರೆ. ಕಾನೂನುಗಳ ಪರಿಪಾಲನೆ ಯಲ್ಲಿ ಅಧಿಕಾರಿಗಳು ಭೇದ ಮಾಡುತ್ತಿದ್ದಾರೆ ಎಂದು ದೂರಿದರು.
ಹಣ ಹಂಚಿರುವವರು ಮೇ 13ರ ಮತ ಎಣಿಕೆ ಸಮಯದಲ್ಲಿ ಜಯಗಳಿಸಿದರೂ ಫಲಿತಾಂಶ ಪ್ರಕಟಿಸದಂತೆ ಮನವಿ ಮಾಡಲಾಗಿತ್ತು ಎಂದ ಅವರು, ಚುನಾವಣಾ ಭ್ರಷ್ಟಾಚಾರದ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಜರುಗಿಸದಿದ್ದರೆ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದರು. ಶ್ರೀಕಾಂತ್ ಇದ್ದರು.