ಜಿಲ್ಲೆ

ಆಯೋಗ ವರದಿ ಜಾರಿಗಾಗಿ ದಸಂಸ ಪ್ರತಿಭಟನೆ 10ಕ್ಕೆ

ದಾವಣಗೆರೆ: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜ.10ರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೇತೂರು ಗ್ರಾಪಂ ವ್ಯಾಪ್ತಿಯ ಸರ್ವೆ ನಂ.170ರ 8-20ಎಕರೆ ಗೋಮಾಳ ಜಾಗದಲ್ಲಿ ಬಿ. ಚಿತ್ತಾನಹಳ್ಳಿ ಹಾಗೂ ಕಲ್ಪನಹಳ್ಳಿಯಲ್ಲಿ ವಾಸವುಳ್ಳ ನಿವೇಶನರಹಿತ ಪರಿಶಿಷ್ಟ ಜಾತಿಯ ಬಡವರಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಬೇಕು. ಸುಮಾರು 70 ವರ್ಷಗಳಿಂದ ದಲಿತ ಕುಟುಂಬಗಳು ಉಳುಮೆ ಮಾಡಿಕೊಂಡು ಬಂದಿದ್ದ, ದೇವಸ್ಥಾನಕ್ಕೆ ಹರಾಜು ಮಾಡಲಾದ ಜಮೀನನ್ನು ಸ್ಮಶಾನಕ್ಕೆ ನೀಡಿರುವುದನ್ನು ರದ್ದುಗೊಳಿಸಬೇಕು. ದಲಿತ ಕುಟುಂಬಗಳಿಗೆ ಖಾತೆ, ಪಹಣಿ ನೀಡಬೇಕೆಂದು ಆಗ್ರಹಿಸಿದರು. ಅಣಜಿ ಹನುಮಂತಪ್ಪ, ಲಿಂಗರಾಜು ಎಂ. ಗಾಂಧಿನಗರ, ಪ್ರದೀಪ್ ಕೆಟಿಜೆ ನಗರ, ಮಂಜುನಾಥ್ ಸುದ್ದಿಗೋಷ್ಠಿಯಲ್ಲಿದ್ದರು.