ಬೀದರ್: ಆಯುರ್ವೇದ ವೈದ್ಯರಿಗೆ 58 ವಿವಿಧ ಶಸ್ತ್ರಚಿಕಿತ್ಸೆ (ಸರ್ಜರಿ)ಗಳನ್ನು ಮಾಡುವಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರೋಧಿಸಿದೆ. ಅಲೋಪಥಿ ಹಾಗೂ ಆಯುರ್ವೇದ ವೈದ್ಯ ಪದ್ಧತಿಯನ್ನು ಮಿಶ್ರಣಗೊಳಿಸಿ ಜನಸಾಮಾನ್ಯರಿಗೆ ಗೊಂದಲಕ್ಕೆ ತಳ್ಳುವ ಈ ಆದೇಶವನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿದೆ.
ಐಎಂಎ ಜಿಲ್ಲಾ ಅಧ್ಯಕ್ಷ ಡಾ. ವಿ.ವಿ.ನಾಗರಾಜ, ಕಾರ್ಯದರ್ಶಿ ಡಾ. ಸತೀಶ ಮುಡಬಿ, ಪ್ರಮುಖರಾದ ಡಾ. ವಿಜಯಕುಮಾರ ಬಲ್ಲೂರಕರ್, ಡಾ. ಸಿ.ಆನಂದರಾವ, ಡಾ. ಬಸವರಾಜ ದಾಬಕೆ, ಡಾ. ವೈಜಿನಾಥ ತೂಗಾಂವೆ ಅವರುಳ್ಳ ನಿಯೋಗ ಮಂಗಳವಾರ ಅಪರ ಡಿಸಿ ರುದ್ರೇಶ ಘಾಳಿ ಅವರಿಗೆ ಭೇಟಿಯಾಗಿ, ಈ ಕುರಿತು ಪ್ರಧಾನಿಯವರಿಗೆ ಬರೆದ ಮನವಿ ಪತ್ರ ಸಲ್ಲಿಸಿತು. ಆಯುರ್ವೇದ ವೈದ್ಯರಿಗೆ ಸರ್ಜರಿಗೆ ಅವಕಾಶ ನೀಡುವ ನಿರ್ಧಾರ ಅವೈಜ್ಞಾನಿಕ, ಅಸಮಂಜಸವಾಗಿದೆ ಎಂದು ದೂರಲಾಗಿದೆ.
ಅಲೋಪಥಿ ಹಾಗೂ ಆಯುರ್ವೇದ ವೈದ್ಯ ಪದ್ಧತಿಗಳು ಪ್ರತ್ಯೇಕ ಚಿಕಿತ್ಸಾ ವಿಧಾನ, ನಿಯಮಗಳನ್ನು ಹೊಂದಿವೆ. ರೋಗಗಳಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿ ಇವು ಎರಡೂ ಭಿನ್ನವಾಗಿಯೇ ಕೆಲಸ ಮಾಡುತ್ತವೆ. ಅಲೋಪಥಿ ಪದ್ಧತಿಯಲ್ಲಿನ ಸರ್ಜರಿಗಳು ಆಯುರ್ವೇದ ಪದ್ಧತಿಯಲ್ಲಿ ಮಾಡಲಾಗದು. ಇವರೆಡಕ್ಕೂ ಮಿಶ್ರಣಗೊಳಿಸಿ ಕೇಂದ್ರ ಸರ್ಕಾರ ವೈದ್ಯರ ವೃತ್ತಿಯನ್ನು ಮಿಕ್ಸೋಪಥಿಯನ್ನಾಗಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ಆಯುರ್ವೇದ ಪದ್ಧತಿಯಲ್ಲಿ ವೈದ್ಯರು ಕೆಲವೊಂದು ಸರ್ಜರಿ ನಡೆಸುತ್ತಾರೆ. ಇದಕ್ಕೆ ಅವರದ್ದೇ ಆದ ಚಿಕಿತ್ಸಾ ವಿಧಾನವಿದೆ. ಇದಕ್ಕೆ ನಮ್ಮದೇನೂ ತಕರಾರು, ಅಭ್ಯಂತರ ಇಲ್ಲ. ಆದರೆ ಅಲೋಪಥಿ ವೈದ್ಯರಿಂದಲೇ ಮಾಡುವಂಥ ಸರ್ಜರಿಗಳು ಹಾಗೂ ಔಷಧೋಪಚಾರಗಳು ಇದೇ ಪದ್ಧತಿಯಲ್ಲಿ ಲಭ್ಯವಿದ್ದರಿಂದ ಇದೆಲ್ಲ ಆಯುರ್ವೇದ ವೈದ್ಯರು ಹೇಗೆ ಮಾಡುತ್ತಾರೆ? ಅನುಭವವೇ ಇಲ್ಲದಂಥ ಸರ್ಜರಿ ಮಾಡುವ ಜತೆಗೆ ಅರವಳಿಕೆ ಚುಚ್ಚು ಮುದ್ದು, ಆ್ಯಂಟಿಬಯಾಟಿಕ್ ಗುಳಿಗೆ ಹೇಗೆಲ್ಲ ಕೊಡುತ್ತಾರೆ? ಸರ್ಕಾರ ಇದಕ್ಕೆ ಅವಕಾಶ ಕೊಟ್ಟರೆ ರೋಗಿಗಳ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ಅಲೋಪಥಿ, ಆಯುರ್ವೇದ, ಯುನಾನಿ, ಹೋಮಿಯೋಥಿ ಇತರೆ ವೈದ್ಯ ಪದ್ಧತಿಗಳು ತಮ್ಮದೇ ವಿಧಾನ ಹೊಂದಿರುವಾಗ ಇವುಗಳನ್ನು ಒಂದಕ್ಕೊಂದು ಮಿಶ್ರಣ ಮಾಡಿದರೆ ಯಾರಿಗೂ ಒಳಿತಾಗಲ್ಲ. ಜನರು ವಿನಾಕಾರಣ ಗೊಂದಲಕ್ಕೆ ಸಿಲುಕುತ್ತಾರೆ. ಕೂಡಲೇ ವಿಷಯ ಗಂಭೀರ ಪರಿಗಣಿಸಿ ಗೆಜೆಟ್ ನಲ್ಲಿ ಹೊರಡಿಸಿರುವ ಈ ಕುರಿತ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ಜನಹಿತದಿಂದ ಸಂಘ ಹೋರಾಟ ನಡೆಸಲಿದೆ ಎಂದು ಎಚ್ಚರಿಸಲಾಗಿದೆ.
ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶ ನೀಡುವುದು ಅವೈಜ್ಞಾನಿಕವಾಗಿದೆ. ಇದರಿಂದ ಜನರಿಗೆ ಆರೋಗ್ಯ ದೃಷ್ಟಿಯಿಂದ ಯಾವುದೇ ಲಾಭವಾಗದು. ಈ ಕ್ರಮವು ಪ್ರಾಚೀನ ಆಯುರ್ವೇದ ಪದ್ಧತಿಯ ಮೂಲ ಹಾಗೂ ಅಸ್ತಿತ್ವವನ್ನೇ ಬುಡಮೇಲು ಮಾಡಬಹುದು. ಸರ್ಕಾರ ನಿರ್ಧಾರ ಹಿಂಪಡೆಯದಿದ್ದರೆ ಡಿ.11ರಂದು ಖಾಸಗಿ ವೈದ್ಯರಿಂದ ತುರ್ತು ಸೇವೆ ಹೊರತುಪಡಿಸಿ ಮುಷ್ಕರ ನಡೆಸಲಾಗುತ್ತದೆ.| ಡಾ. ವಿ.ವಿ.ನಾಗರಾಜಐಎಂಎ ಜಿಲ್ಲಾ ಅಧ್ಯಕ್ಷ