ದೊಡ್ಡಬಳ್ಳಾಪುರ: ಕರೊನಾ ಪಿಡುಗು ಬಂದ ಬಳಿಕ ದೇಶದಲ್ಲಿ ಆಯುಷ್ ಚಿಕಿತ್ಸಾ ವಿಧಾನದತ್ತ ಹೆಚ್ಚು ಜನರು ಮುಖಮಾಡುತ್ತಿದ್ದಾರೆ. ಆಯುಷ್ ಚಿಕಿತ್ಸೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ತಸ್ಲಿಮಾ ಹೇಳಿದರು.
ಸೊಣ್ಣಪ್ಪನಹಳ್ಳಿಯಲ್ಲಿ ತಾಲೂಕು ಆಯುಷ್ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರಲ್ಲೂ ಆಯುಷ್ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಿ, ಆಯುಷ್ ಚಿಕಿತ್ಸೆಯ ಉಪಯೋಗ ತಿಳಿಸುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಮದಲ್ಲಿ ಎಲ್ಲ ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಆಯುಷ್ ಆಸ್ಪತ್ರೆಯಲ್ಲಿ ಆರ್ಯುವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ, ಹೋಮಿಯೋಪಥಿ ಚಿಕಿತ್ಸಾ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ಖಾಸಗಿ ಆಸ್ಪತ್ರೆಯಲ್ಲಿ ಹಣ ಪೋಲು ಮಾಡುವುದಕ್ಕಿಂತ ಆಯುಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಹಣದ ಉಳಿತಾಯವೂ ಆಗುತ್ತದೆ. ಆರೋಗ್ಯವೂ ಉತ್ತಮವಾಗುತ್ತದೆ ಎಂದು ಹೇಳಿದರು.
ತಾಪಂ ಅಧ್ಯಕ್ಷ ನಾರಾಯಣಗೌಡ ಮಾತನಾಡಿ, ಮುದ್ದೆ ಊಟದ ಜತೆ ಯೋಗ, ಆಯುಷ್ ಇಲಾಖೆ ಚಿಕಿತ್ಸೆಗಳನ್ನು ಪಡೆದರೆ ಆರೋಗ್ಯವಂತರಾಗಿರುತ್ತೇವೆ. ತಾಲೂಕಿನ ಪ್ರತಿಹಳ್ಳಿಯಲ್ಲಿ ಆಯುಷ್ ಸೇವಾಗ್ರಾಮ ಯೋಜನೆಯಡಿ ಮನೆಮನೆಗೂ ಹೋಗಿ ಆಯುರ್ವೇದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಆಯುಷ್ ಚಿಕಿತ್ಸೆ ಪಡೆಯಲು ಹಿಂದೇಟು ಹಾಕಬಾರದು. ಇದರಲ್ಲಿ ಯಾವುದೇ ಅಡ್ಡಪರಿಣಾಮ ಇರುವುದಿಲ್ಲ. ಆಯುಷ್ ಇಲಾಖೆ, ಚಿಕಿತ್ಸಾ ಕ್ರಮಗಳ ಬಗ್ಗೆ ಹೆಚ್ಚಿನ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ಆಯುಷ್ ವೈದ್ಯಾಧಿಕಾರಿ ಡಾ. ಲಲಿತಾ ಮಾತನಾಡಿ, ಕೋಡಿಹಳ್ಳಿಯಲ್ಲಿ ಈಗಾಗಲೇ ಯೋಗ ಮಂದಿರ ಆರಂಭಿಸಲಾಗಿದೆ. ಬೆಳಗ್ಗೆ 5ರಿಂದ 6 ಹಾಗೂ ಸಂಜೆ 5ರಿಂದ 6 ಗಂಟೆವರೆಗೆ ಯೋಗ ತರಬೇತಿ ನೀಡಲಾಗುತ್ತಿದೆ. ಸಕ್ಕರೆ, ಬಿಪಿ, ಅಸ್ತಮಾ, ಮಂಡಿನೋವು, ವಾಯು ತೊಂದರೆ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯರಾದ ಪ್ರಭಾಕರ್, ಮಂಗಳಾ ಮಂಜುನಾಥ, ಮುಖಂಡರಾದ ಚಿಕ್ಕನರಸಪ್ಪ, ನಂಜುಂಡಪ್ಪ, ರಾಮಯ್ಯ, ರಾಮಾಂಜಿನಪ್ಪ, ಶಾಲಾ ಮುಖ್ಯೋಪಾಧ್ಯಾಯ ಕೆ. ವೆಂಕಟೇಶ್, ಎಸ್ ಡಿಎಂಸಿ ಅಧ್ಯಕ್ಷ ಮಹೇಶ್ ಮತ್ತಿತರರಿದ್ದರು.