ಮಂಡ್ಯ: ಆಯುರ್ವೇದ ಶಾಸ್ತ್ರದಲ್ಲಿರುವ ಅಪ್ರಕಟಿತ ತಾಳೆಗರಿಗಳನ್ನು ಮುದ್ರಣ ರೂಪಕ್ಕೆ ತರಲು ಆಯುರ್ವೇದ ವಿದ್ಯಾರ್ಥಿಗಳಿಗೆ ಗ್ರಂಥ ಸಂಪಾದನೆಯ ಕುರಿತಾಗಿ ವಿಶೇಷ ಮಾರ್ಗದರ್ಶನ ಮಾಡಲು ಮೇಲುಕೋಟೆಯಲ್ಲಿ ಕಾರ್ಯಾಗಾರವನ್ನು ಆಯೋಜಿಸಿದೆ ಎಂದು ಕರ್ನಾಟಕ ಸಂಸ್ಕೃತ ವಿವಿಯ ಕುಲಪತಿ ಡಾ.ಎಸ್. ಅಹಲ್ಯಾಶರ್ಮಾ ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನ ಸಹಯೋಗದೊಂದಿಗೆ ಮೇಲಕೋಟೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಎರಡು ದಿನಗಳ ಆಯುರ್ವೇದ ತಾಳೆಗರಿಗಳ ಅಧ್ಯಯನ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತದ ಲಿಪಿಗಳ ಜ್ಞಾನ, ಭಾಷಾ ಜ್ಞಾನ ಹಾಗೂ ವಿಷಯ ಜ್ಞಾನಗಳೆಂಬ ಮೂರು ವಿಚಾರಗಳು ಒಟ್ಟು ಸೇರಿದರೆ ಮಾತ್ರ ನಮ್ಮ ಪುರಾತನ ತಾಳೆಗರಿಯನ್ನು ಮುದ್ರಣದ ರೂಪಕ್ಕೆ ತರಲು ಸಾಧ್ಯ. ತಾಳೆಗರಿಗಳಲ್ಲಿ ಆಯುರ್ವೇದದ ಎಷ್ಟೋ ವಿಚಾರಗಳು ತುಂಬಿದ್ದು, ಸಾಕಷ್ಟು ಅಧ್ಯಯನ ಮಾಡಬೇಕಾದ ಅಗತ್ಯವಿದೆ. ಇದರಿಂದ ಹಲವು ರೋಗಗಳಿಗೆ ಔಷಧ ನೀಡುವ ಕಾರ್ಯ ಸಫಲವಾಗಲಿದೆ. ಮೇಲುಕೋಟೆಯಂತಹ ಪ್ರಮುಖ ಸ್ಥಳಗಳಲ್ಲಿ ಪಾರಂಪರಿಕವಾಗಿ ನಾಟಿವೈದ್ಯ ಮಾಡುತ್ತಿದ್ದವರು ಇದ್ದಾರೆ. ಇಂತಹ ಎಷ್ಟೋ ಮನೆಗಳಲ್ಲಿ ಅಪ್ರಕಟಿತವಾದ ಔಷಧಗಳ ವಿವರವಿರುವ ತಾಳೆಗರಿಗಳಿದ್ದು, ಅವುಗಳನ್ನು ಸಂಗ್ರಹಿಸಿ ಪ್ರಕಟಿಸಬೇಕಾದ ಕಾರ್ಯ ಆಗಬೇಕಿದೆ.
ಈ ಕಾರಣಕ್ಕಾಗಿಯೇ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನ ಸಂಸತ್‌ನ ಸಹಯೋಗದೊಂದಿಗೆ ಮೇಲುಕೋಟೆಯಲ್ಲಿ ಎರಡು ದಿನಗಳ ಕಾಲ ಆಯುರ್ವೇದ ತಾಳೆಗರಿಗಳ ಅಧ್ಯಯನ ಮಾಡುವ ಕಾರ್ಯಾಗಾರವನ್ನು ಆಯೋಜಿಸಿ ತಾಳೆಗರಿಗಳಲ್ಲಿ ಅಡಗಿದ ಅಪ್ರಕಟಿತವಾದ ಹಲವಾರು ಉಪಯುಕ್ತ ಆಯುರ್ವೇದ ಔಷಧಗಳ ಸಾರವನ್ನು ಪಟ್ಟಿಮಾಡಿದೆ. ಕರಾರುವಾಕ್ಕಾಗಿ ಅಧ್ಯಯನ ಮಾಡಿದ ನಂತರ ಪುಸ್ತಕಗಳ ರೂಪದಲ್ಲಿ ಹೊರತರಲಾಗುತ್ತದೆ. ಇದರಿಂದ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದರು.
ಮೈಸೂರಿನ ವೈದ್ಯ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಆಂಜನೇಯಮೂರ್ತಿ ಮಾತನಾಡಿ, ಆಯುರ್ವೇದ ವೈದ್ಯರಾದವರು ರೋಗಿಗಳಿಗೆ ಔಷಧ ಕೊಡುವುದು ಮಾತ್ರವಲ್ಲದೆ ಆಯುರ್ವೇದ ಮೂಲಗ್ರಂಥಗಳನ್ನು ಅಧ್ಯಯನ ಮಾಡಬೇಕು. ಅಪ್ರಕಟಿತ ತಾಳೆಗರಿಗಳನ್ನು ಮುದ್ರಣ ರೂಪಕ್ಕೆ ತರಲು ಪ್ರಯತ್ನಿಸಬೇಕು. ಮೂಲಿಕೆ ಸಸ್ಯಗಳ ವಿವರಗಳನ್ನು ಪಟ್ಟಿಮಾಡಬೇಕು. ಪಾರಂಪರಿಕ ಆಯುರ್ವೇದ ಪದ್ಧತಿಯನ್ನು ನಿಖರವಾಗಿ ಅಧ್ಯಯನ ಮಾಡುವುದರಿಂದ ಇದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಹಲವು ರೋಗಗಳಿಗೆ ಸಹ ಔಷಧ ನೀಡಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿದ್ವಾಂಸರಾದ ಡಾ.ಎಚ್.ವಿ. ನಾಗರಾಜರಾವ್, ಡಾ.ಲಕ್ಷ್ಮೀನಾರಾಯಣ ಶೆಣೈ, ವಿದ್ವಾನ್ ಎಸ್. ಕುಮಾರ್, ಡಾ.ವಿನಾಯಕ ನಾಮಣ್ಣವರ ಹಾಗೂ ಡಾ.ರಾಮಕೃಷ್ಣಭಟ್ ಮೊದಲಾದವರು ವಿಶೇಷ ಉಪನ್ಯಾಸ ನೀಡಿದರು. ಶುಕ್ರವಾರ ಮತ್ತು ಶನಿವಾರ ನಡೆದ ಕಾರ್ಯಾಗಾರದಲ್ಲಿ ವಿವಿಧ ರಾಜ್ಯಗಳಿಂದ ಒಟ್ಟು 52 ಜನ ಆಯುರ್ವೇದ ಎಂ.ಡಿ. ವಿದ್ಯಾರ್ಥಿಗಳು ಭಾಗವಹಿಸಿದ್ದರು.