ಹುಲಸೂರು: ಆಯುಧಗಳ ಬದಲು ಆದರ್ಶಗಳು ಮಾತನಾಡಬೇಕು. ಭಾರತ ಆದರ್ಶಗಳಿಂದಲೇ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ ಹೊರತು ಆಯುಧಗಳಿಂದಲ್ಲ ಎಂದು ಮೈಸೂರು ಉರಿಲಿಂಗ ಪೆದ್ದಿ ಮಠದ ಪೀಠಾಧಿಪತಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ನುಡಿದರು.
ಬೇಲೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಉರಿಲಿಂಗಪೆದ್ದಿ ಉತ್ಸವ ಹಾಗೂ ಮಹಿಳಾ ಜಾನಪದ ಪ್ರಥಮ ಸಮ್ಮೇಳನ ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಆಯುಧ ಮಾತನಾಡಿದರೆ ದೇಶ ನಾಶವಾಗುತ್ತದೆ ಎಂದರು.
ದೇಶದಲ್ಲಿ ಸಮಾನತೆ ಸಾರಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದ್ದರು. ಎಲ್ಲ ಸಮುದಾಯದವರು ಉನ್ನತ ಸ್ಥಾನಕ್ಕೆ ಹೋಗಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.
ತೃತೀಯ ಲಿಂಗಿಗಳಿಗೂ ಆಶ್ರಯ ಮನೆ ನೀಡುವುದರ ಜತೆಗೆ ಮಾಸಾಶನ ದೊರಕಿಸಿಕೊಡಬೇಕು ಎಂದು ಮುಖ್ಯಮಂತ್ರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ತೃತೀಯ ಲಿಂಗಿಗಳಿಗೂ ನಮ್ಮಂತೆ ಜೀವಿಸುವ ಹಕ್ಕಿದೆ ಎಂದ ಅವರು, ಇಂದಿನ ದಿನಗಳಲ್ಲಿ ಗುರು-ಹಿರಿಯರು ಹಾಗೂ ತಂದೆ-ತಾಯಿಗೆ ಗೌರವ ಇಲ್ಲದಂತಾಗಿದೆ. ಯಾವುದೇ ಮಾತನಾಡುವ ಮುನ್ನ ಹತ್ತು ಸಾರಿ ಯೋಚಿಸಿ ಮಾತನಾಡಬೇಕು ಎಂದರು.
ಸಮ್ಮೇಳನಾಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿ, ನಾವು ಯಾವಾಗಲೂ ನಮಗಿಂತ ಮೇಲೆ ಇರುವವರನ್ನು ನೋಡಿ ಜೀವಿಸಬಾರದು. ನಮಗಿಂತ ಕೆಳಗಿರುವವರನ್ನು ನೋಡಿ ಬದುಕಬೇಕು. ಅಂದಾಗಲೇ ನಾವು ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಾನು ಯಾವಾಗಲೂ ರಥದ ಮುಂದೆ ಕುಣಿದು ಕುಪ್ಪಳಿಸುತ್ತಿದ್ದೆ. ಆದರೆ ಬೇಲೂರಿನಲ್ಲಿ ನನ್ನನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ರಥದಲ್ಲಿ ಕೂಡುವ ಅವಕಾಶ ಮಾಡಿಕೊಟ್ಟ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸುವೆ. ಈ ಸನ್ನಿವೇಶ ನನ್ನ ತಂದೆ-ತಾಯಿ ನೋಡಿದರೆ ತುಂಬ ಖುಷಿ ಪಡುತ್ತಿದ್ದರು. ಆದರೆ ಅವರಿಗೆ ನೋಡುವ ಭಾಗ್ಯ ಇಲ್ಲ ಎಂದು ಭಾವುಕರಾದರು.
ಉರಿಲಿಂಗಪೆದ್ದಿ ಪ್ರಶಸ್ತಿ ಸ್ವೀಕರಿಸಿದ ಆಂಧ್ರಪ್ರದೇಶ ದ್ರಾವಿಡಿಯನ್ ವಿಶ್ವವಿದ್ಯಾಲಯ ಕುಲಪತಿ ಡಾ.ಕೆ.ಶಾರದಾ ಮಾತನಾಡಿ, ಕಲ್ಯಾಣ ಪವಿತ್ರ ನಾಡು. ಶರಣರು ನಡೆದಾಡಿದ ಈ ನೆಲದಲ್ಲಿ ನಾವು ನಡೆದಾಡುತ್ತಿರುವುದು ಸಂತಸದ ವಿಷಯ. ಇಂದಿನ ಯುಗದಲ್ಲಿ ಲಕ್ಷಗಟ್ಟಲೇ ಸಂಬಳ ಪಡೆದರೂ ದಾನ-ಧರ್ಮ ಮಾಡಬೇಕಾದರೆ ಹಿಂದೇಟು ಹಾಕುತ್ತಾರೆ. ಆದರೆ ಈ ಭಾಗದಲ್ಲಿ ಮಧ್ಯಮ ಹಾಗೂ ಬಡವರು ಸಹ ಕೈಲಾದಷ್ಟು ಮಠ-ಮಂದಿರಗಳಿಗೆ ದಾನ ಮಾಡುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತಿದೆ ಎಂದರು.
ಡಾ.ಹೇಮಲತಾ ವಡ್ಡೆ ಮಾತನಾಡಿದರು. ಶ್ರೀ ಪಂಚಾಕ್ಷರಿ ಸ್ವಾಮೀಜಿ, ಸುರೇಶ ಕಾನೇಕರ ಇತರರಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಡಾ.ಗವಿಸಿದ್ದಪ್ಪ ಪಾಟೀಲ್ ಸ್ವಾಗತಿಸಿದರು. ಸಿದ್ಧಾರ್ಥ ಮಿತ್ರಾ, ಸಂಜುಕುಮಾರ ನಡುಕರ ನಿರೂಪಣೆ ಮಾಡಿದರು.
ಉತ್ತರ ಕರ್ನಾಟಕ ಎಂದೂ ಹಿಂದುಳಿದಿಲ್ಲ. ಇಲ್ಲಿ ಎಲ್ಲವೂ ದೊರೆಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ನಾವು ನಮ್ಮ ಕೆಲಸದಲ್ಲಿ ಎಷ್ಟೇ ದೊಡ್ಡವರಾಗಿರಬಹುದು. ಆದರೆ ಕೆಲವೊಂದು ವಿಷಯದಲ್ಲಿ ಚಿಕ್ಕವರಾಗಿ ಉಳಿಯುತ್ತೇವೆ. ಯಾವತ್ತೂ ನಾವು ದೊಡ್ಡವರೆಂದು ಮೆರೆಯಬಾರದು. ದೇಸಿ ಸಂಸ್ಕೃತಿ ಬಗ್ಗೆ ಗೌರವವಿರಬೇಕು.
| ಡಾ.ಕೆ.ಶಾರದಾ, ಆಂಧ್ರಪ್ರದೇಶ ದ್ರಾವಿಡಿಯನ್ ವಿಶ್ವವಿದ್ಯಾಲಯ ಕುಲಪತಿ