ಬೆಳಗಾವಿ: ದಕ್ಷಿಣ ಮತ ಕ್ಷೇತ್ರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯದಿರುವುದನ್ನು ಖಂಡಿಸಿ ಶಾಸಕ ಅಭಯ ಪಾಟೀಲ, ವಿಶ್ವೇಶ್ವರಯ್ಯ ನಗರದಲ್ಲಿರುವ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ ಅವರ ಮನೆ ಎದುರು ಭಾನುವಾರ ತ್ಯಾಜ್ಯ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಕಾರ್ಯಕರ್ತರೊಂದಿಗೆ ಬೆಳಗ್ಗೆಯಿಂದ ಸ್ವಚ್ಛತಾ ಕಾರ್ಯ ಕೈಗೊಂಡ ಅಭಯ ಪಾಟೀಲ, ಸ್ವತಃ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ಆಯುಕ್ತರ ಮನೆ ಎದುರು ಕಸ ಚೆಲ್ಲಿದರು. ನನ್ನ ಕ್ಷೇತ್ರದಲ್ಲಿ ಸರಿಯಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸುವಂತೆ ಎರಡ್ಮೂರು ತಿಂಗಳಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುತ್ತ ಬಂದಿದ್ದೇನೆ. ಆದರೆ, ಅವರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಸವನ್ನೆಲ್ಲ ಇಲ್ಲಿ ತಂದು ಸುರಿದಿದ್ದೇನೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಪ್ರತಿ ಭಾನುವಾರವೂ ಇಲ್ಲಿಯೇ ತ್ಯಾಜ್ಯ ತಂದು ಸುರಿಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಪೌರ ಕಾರ್ಮಿಕರು ಸ್ಥಳಕ್ಕಾಗಮಿಸಿ, ತ್ಯಾಜ್ಯ ತೆರವುಗೊಳಿಸಿದರು. ಮನೆ ಮುಂದೆ ಕಸ ಸುರಿದಿರುವ ವಿಚಾರವಾಗಿ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಪ್ರತಿಕ್ರಿಯಿಸಿ, ಕೋವಿಡ್ ಆತಂಕ, ನೆರೆ ಹಾವಳಿ ಮಧ್ಯೆಯೂ ಪೌರ ಕಾರ್ಮಿಕರು ಕಸ ವಿಲೇವಾರಿ
ಮಾಡುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು. ಶಾಸಕರು ನನ್ನ ನಿವಾಸದ ಎದುರು ತ್ಯಾಜ್ಯ ಎಸೆದಿರುವ
ಘಟನೆಯನ್ನು ಧನಾತ್ಮಕವಾಗಿಯೇ ಸ್ವೀಕರಿಸಿ, ನಗರದಲ್ಲಿ ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.