ಹುಕ್ಕೇರಿ: ದೇಶದಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಜಿಲ್ಲೆಯಲ್ಲೂ ಸಮಸ್ಯೆ ಬಾಧಿಸಬಾರದು ಎಂಬ ಉದ್ದೇಶದಿಂದ 350 ಸಿಲಿಂಡರ್ ಸಾಮರ್ಥ್ಯದ ಎರಡು ಆಕ್ಸಿಜನ್ ಉತ್ಪಾದನಾ ಘಟಕ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು. ಸ್ಥಳೀಯ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ಅನುದಾನದಲ್ಲಿಯೇ ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ ತಲಾ 350 ಸಿಲಿಂಡರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಲಾಗುತ್ತಿದೆ ಎಂದರು. ಕಳೆದ ವರ್ಷ ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್‌ನಿಂದ ಸರ್ಕಾರಕ್ಕೆ 1 ಕೋಟಿ ರೂ. ನೀಡಲಾಗಿತ್ತು. ಈ ವರ್ಷ ಆಕ್ಸಿಜನ್ ಉತ್ಪಾದನೆ ಘಟಕ ಸ್ಥಾಪಿಸುವ ನಿರ್ದೇಶಕರ ಮಂಡಳಿಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿಲಾಗಿದ್ದು, ಎರಡೂ ಘಟಕ ಸ್ಥಾಪನೆಗೆ ಬೇಕಾಗುವ ಖರ್ಚು-ವೆಚ್ಚದ ಕುರಿತು ಕ್ರಿಯಾ ಯೋಜನೆ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.
ಲಾಕ್‌ಡೌನ್ ಮುನ್ನ ಅವಕಾಶ ನೀಡಿ: ಕೋವಿಡ್-19 ಸೋಂಕು ಸಂಪೂರ್ಣ ನಿಯಂತ್ರಣಕ್ಕಾಗಿ ಸರ್ಕಾರವು ಲಾಕ್‌ಡೌನ್ ಘೋಷಿಸುವ ಮುನ್ನ ಜನರಿಗೆ ಕಾಲಾವಕಾಶ ನೀಡುವುದು ಸೂಕ್ತ. ಬೀದಿ ಬದಿ ವ್ಯಾಪಾರಿಗಳು, ಆಟೋ, ಟ್ಯಾಕ್ಸಿ ಚಾಲಕರು, ಕೂಲಿ ಕಾರ್ಮಿಕರು, ರೈತರಿಗಾಗಿ ಪರ್ಯಾಯ ಯೋಜನೆ ರೂಪಿಸಬೇಕು. ಅಲ್ಲದೆ, ದಿನದ ದುಡಿಮೆ ಮೇಲೆ ಜೀವನ ಸಾಗಿಸುವ ಬಡವರಿಗೆ ಆರ್ಥಿಕ ನೆರವು ಘೋಷಿಸಲು ಕ್ರಮ ವಹಿಸಬೇಕು ಎಂದು ವಿನಂತಿಸಿದರು.
ಕರೊನಾ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರವನ್ನು ಪ್ರತಿಪಕ್ಷಗಳು ಟೀಕಿಸುವುದು ಸಾಮಾನ್ಯ. ಆದರೆ, ಎಲ್ಲದಕ್ಕೂ ವಿರೋಧಿಸುವ ಬದಲು ಪ್ರತಿಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಬೇಕು ಎಂದರು.