ಜಿಲ್ಲೆ

ಆಮೆವೇಗದ ಮುಖ್ಯರಸ್ತೆ ವಿಸ್ತರಣೆ ಕಾರ್ಯ

ರಾಜಣ್ಣ

ಹಳೇಬೀಡು: ಚುರುಕಿನಿಂದ ಸಾಗುತ್ತಿದ್ದ ಹಳೇಬೀಡು ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಕಾರ್ಯ ಕಳೆದ ಮೂರು ತಿಂಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಯುವುದು ಅನುಮಾನವೆನಿಸಿದೆ.

ಇತಿಹಾಸ ಪ್ರಸಿದ್ಧ ದೇಗುಲಗಳಿರುವ ಹಳೇಬೀಡಿಗೆ ನಿತ್ಯವೂ ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ವಾಹನಗಳು ಬಂದು ಹೋಗುತ್ತವೆ. ಪಟ್ಟಣಕ್ಕೆ ಪ್ರವೇಶಿಸಿದೊಡನೆ ಇದೊಂದು ಐತಿಹಾಸಿಕ ಮಹತ್ವವುಳ್ಳ ಸ್ಥಳವೆಂದು ತಿಳಿಯಬೇಕು ಎಂಬ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಬಹು ನಿರೀಕ್ಷಿತ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡು ಮೂರು ವರ್ಷವಾಗುತ್ತಿದೆ. ಆದರೆ, ಕೆಲ ತಿಂಗಳಿಂದ ಕಾಮಗಾರಿ ಆಮೆವೇಗದಲ್ಲಿ ಸಾಗುತ್ತಿದ್ದು, ಶೀಘ್ರವಾಗಿ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಜನತೆ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಜಾವಗಲ್ ವೃತ್ತದಿಂದ ಹೊಯ್ಸಳ ವೃತ್ತ ಮತ್ತು ಬಸ್ತಿಹಳ್ಳಿ ಗ್ರಾಮದವರೆಗೆ ಎರಡು ಮಾದರಿಯಲ್ಲಿ ರಸ್ತೆ ಅಭಿವೃದ್ಧಿ ಯೋಜನೆಯನ್ನು ರೂಪಿಸಲಾಗಿದ್ದು, ಒಟ್ಟು 5 ಕೋಟಿ ರೂ.ಅಂದಾಜು ವೆಚ್ಚವಾಗಲಿದೆ. ರಸ್ತೆ ವಿಭಜಕವನ್ನು ಹೊರತುಪಡಿಸಿ ಒಟ್ಟು 80 ಅಡಿ ಜಾಗವನ್ನು ಸರ್ವೇ ಮೂಲಕ ಗುರುತಿಸಲಾಗಿದೆ. ಒಂದೊಂದು ಬದಿಗೆ 40 ಅಡಿ ರಸ್ತೆ, ಆಧುನಿಕ ಮಾದರಿ ಚರಂಡಿ ಹಾಗೂ ಪಾದಚಾರಿ ಮಾರ್ಗವನ್ನು ನಿರ್ಮಿಸುವ ಉದ್ದೇಶವಿದ್ದು, ಮಾರ್ಗದುದ್ದಕ್ಕೂ ಆಕರ್ಷಕ ವಿದ್ಯುದ್ದೀಪಗಳನ್ನು ಅಳವಡಿಸುವ ಬಗ್ಗೆಯೂ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ತಿದ್ದುಪಡಿಗಳಿಲ್ಲದೆ ಯಥಾವತ್ ಕಾಮಗಾರಿ ನಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಪ್ರಸ್ತುತ ಕಾಮಗಾರಿ ಕುಂಟುತ್ತಾ ಸಾಗಿರುವುದು ಚಿಂತೆಗೆ ಕಾರಣವಾಗಿದೆ. ಕಟ್ಟಡ ತೆರವು ಸಂಬಂಧ ಕೆಲವರು ನ್ಯಾಯಾಲಯದ ಮೊರೆ ಹೋಗಿರುವುದರಿಂದ ರಸ್ತೆ ನಿರ್ಮಾಣ ಕಾರ್ಯ ನನೆಗುದಿಗೆ ಬೀಳುವಂತಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಬಸ್ತಿಹಳ್ಳಿ ಗ್ರಾಮದಿಂದ ಹಗರೆ ವರೆಗಿನ ರಸ್ತೆಯನ್ನು ಈಗಾಗಲೇ ಸ್ವಲ್ಪ ಮಟ್ಟಿಗೆ ಅಭಿವೃದ್ಧಿಪಡಿಸಿದ್ದರೂ ಸತತ ಮಳೆಯ ಕಾರಣ ಗುಂಡಿ ಬಿದ್ದು ಅಲ್ಲೂ ವಾಹನ ಸಂಚಾರಕ್ಕೆ ತೊಡಕಾಗಿದೆ.

ಕಟ್ಟಡ ತೆರವಿಗೆ ನ್ಯಾಯಯುತ ಮಾನದಂಡ ಅನುಸರಿಸಿ ಅನಧಿಕೃತ ಕಟ್ಟಡ ಹಾಗೂ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆಗೆ ಬೇಕಾದ ಶೇ.80ರಷ್ಟು ಜಾಗವನ್ನು ಈಗಾಗಲೇ ಇಲಾಖೆ ವಶಪಡಿಸಿಕೊಂಡಿದೆ. ರಸ್ತೆ ಬದಿಯ ಚರಂಡಿ ನಿರ್ಮಾಣ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಯೋಜನೆ ಮತ್ತು ರಸ್ತೆ ಆಸ್ತಿ ನಿರ್ವಹಣೆ ಕೇಂದ್ರವು ಕಾಮಗಾರಿಯ ಹೊಣೆ ಹೊತ್ತಿದ್ದು, ಪೂರ್ವ ನಿರ್ಧರಿತ ನಕ್ಷೆಯಂತೆ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ಹೈಟೆಕ್ ವಿದ್ಯುದ್ದೀಪಗಳ ಅಳವಡಿಕೆ ಕಾರ್ಯವನ್ನು ಮುಗಿಸಬೇಕಿದೆ. ಆದರೆ, ಆಸ್ತಿ ತೆರವು ಸಂಬಂಧ ಕೆಲ ಕಟ್ಟಡಗಳ ಮಾಲೀಕರು ಸೂಕ್ತ ಪರಿಹಾರ ಮತ್ತು ನ್ಯಾಯಯುತ ಅಳತೆಯ ಮಾನದಂಡವನ್ನು ಅನುಸರಿಸುವಂತೆ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಒಂದು ಬದಿಯಲ್ಲಿ ಕಡಿಮೆ ಜಾಗವನ್ನು ಆಕ್ರಮಿಸಿಕೊಂಡು ಇನ್ನೊಂದು ಬದಿಯಲ್ಲಿ ಮಾತ್ರ ಹೆಚ್ಚಿನ ಜಾಗಕ್ಕೆ ಅಳತೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಎಚ್ಚರಿಕೆ ಫಲಕ ಅಳವಡಿಕೆಗೆ ಆಗ್ರಹ: ರಸ್ತೆ ನಿರ್ಮಾಣಕ್ಕಾಗಿ ಕಟ್ಟಡ ತೆರವು ಮಾಡಿಸುವುದು ಅನಿವಾರ್ಯವಾಗಿದ್ದ ಕಾರಣ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಖಾಲಿ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ ಬಹಳಷ್ಟು ಮಾಲೀಕರು ಕಟ್ಟಡಗಳನ್ನು ಸ್ವ ಇಚ್ಛೆಯಿಂದ ತೆರವುಗೊಳಿಸಿದ್ದಾರೆ. ಈಗಾಗಲೆ ಒಂದು ಬದಿಯಲ್ಲಿ ಸಿಮೆಂಟ್ ರಸ್ತೆಯ ವೈಟ್ ಟಾಪಿಂಗ್ ಕೆಲಸ ಮುಗಿದಿದೆ. ಇನ್ನೊಂದು ಬದಿಗೆ ಜಲ್ಲಿ ಮಿಶ್ರಣ ಹಾಕಿ ಸಮತಟ್ಟು ಮಾಡಿ, ಶೇ.50ರಷ್ಟು ಸಿಮೆಂಟ್ ರಸ್ತೆ ನಿರ್ಮಿಸಲಾಗಿದೆ. ಆದರೆ. ಪ್ರವಾಸಿಗರಿಗೆ ಕಾಮಗಾರಿಯು ನಡೆಯುತ್ತಿರುವ ಯಾವುದೇ ಮಾಹಿತಿ ತಿಳಿಯದ ಕಾರಣ ಗೊಂದಲದಲ್ಲಿ ಸಂಚರಿಸಿ ಪರದಾಡುವ ದೃಶ್ಯ ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ, ರಸ್ತೆಯ ಒಂದು ಬದಿಯ ಉದ್ದಕ್ಕೆ ಕೆಂಪು ಪಟ್ಟಿ ಹಾಕುವುದು, ಆರಂಭದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಫಲಕ ಅಳವಡಿಸುವುದು ಹಾಗೂ ಡೈವರ್ಶನ್ ಮಾಹಿತಿಯನ್ನು ರಾತ್ರಿ ವೇಳೆಯೂ ಕಾಣುವಂತೆ ಅಳವಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದ್ಯಾವುದೂ ಇಲ್ಲದೆ ಲೋಕೋಪಯೋಗಿ ಇಲಾಖೆ ಕೆಲಸ ಮುಂದುವರಿಸುತ್ತಿರುವುದು ಅವ್ಯವಸ್ಥೆಗೆ ಕಾರಣವಾಗಿದೆ.

ಜಲ್ಲಿ ರಸ್ತೆಯಲ್ಲಿ ನಿತ್ಯವೂ ಧೂಳಿನ ಸ್ನಾನ:

ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾದಾಗಿನಿಂದ ಮುಖ್ಯರಸ್ತೆಯಲ್ಲಿ ವಿಪರೀತ ಧೂಳು ಏಳದಂತೆ ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಹಾಕುವ ವ್ಯವಸ್ಥೆ ಇತ್ತು. ಪ್ರಸ್ತುತ ರಸ್ತೆಗೆ ನೀರು ಹಾಕುವುದನ್ನು ಇಲಾಖೆ ನಿಲ್ಲಿಸಿದೆ. ಇದರಿಂದ ಎಡಭಾಗದ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಪ್ರತಿನಿತ್ಯ ಧೂಳಿನ ಸ್ನಾನವಾಗುತ್ತಿದೆ. ಇನ್ನೊಂದು ಬದಿಯಲ್ಲಿ ರಸ್ತೆಯ ಕಾಮಗಾರಿ ಮುಗಿದು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ, ರಸ್ತೆಯುದ್ದಕ್ಕೂ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದಾಗಿ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ. ಬಿಸಿಲಿನ ತಾಪದ ಜತೆಗೆ ಧೂಳನ್ನೂ ಸಹಿಸಿಕೊಂಡು ಓಡಾಡುತ್ತಿರುವ ಸ್ಥಳೀಯರು ಅಸ್ತಮಾ, ಕೆಮ್ಮು ಮುಂತಾದ ಶ್ವಾಸ ಸಂಬಂಧಿ ರೋಗಗಳೂ ಉಲ್ಬಣಿಸುತ್ತಿದೆ ಎನ್ನುತ್ತಾರೆ. 1968ರಲ್ಲಿ 80 ಅಡಿ ರಸ್ತೆ ನಿರ್ಮಾಣದ ಬಗ್ಗೆ ನೊಟಿಫಿಕೇಷನ್ ಹೊರಡಿಸಲಾಗಿದ್ದು, ರಸ್ತೆಯ ಉನ್ನತೀಕರಣ ಅಥವಾ ವಿಸ್ತರಣೆ ಬಗ್ಗೆ ಕಾಲಕಾಲಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳಿಗೆ ಇಲ್ಲಿಯವರೆಗೆ ಅನುಮೋದನೆ ದೊರಕಿರಲಿಲ್ಲ. 2023 ಜನವರಿ ತಿಂಗಳಲ್ಲಿ ಕಾಮಗಾರಿಗೆ ಹಸಿರು ನಿಶಾನೆ ದೊರಕಿದ್ದರಿಂದ ಮುಂದುವರಿಯಲಾಗಿದೆ. ಆದರೆ, ವರ್ಷದೊಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದ ಇಲಾಖೆ ಅಧಿಕಾರಿಗಳು ಮೂರು ವರ್ಷವಾಗುತ್ತಾ ಬಂದರೂ ಯೋಜನೆಯನ್ನು ಮುಗಿಸಲು ಹರಸಾಹಸಪಡುತ್ತಿದ್ದಾರೆ.

ಲಕ್ಷಾಂತರ ರೂ.ವೆಚ್ಚ ಮಾಡಿ ಮುಖ್ಯರಸ್ತೆಯ ಬದಿಯಲ್ಲಿ ನಿವೇಶನವನ್ನು ಖರೀಸಿದ್ದೇನೆ. ವಿಸ್ತರಣೆ ಸಂಬಂಧ ಎರಡೂ ಕಡೆಯಲ್ಲಿ ನ್ಯಾಯಯುತ ಮಾನದಂಡ ಅನಸರಿಸಬೇಕು. ಉಡುಸಲಮ್ಮ ದೇವಸ್ಥಾನದಿಂದ ಮುಂದುವರಿದ ರಸ್ತೆಗೆ ಹೆಚ್ಚಿನ ಜಾಗವನ್ನು ಬಿಡುವಂತೆ ಸೂಚಿಸಲಾಗಿದೆ. ಇನ್ನೊಂದು ಬದಿಗೆ ಕಡಿಮೆ ಮಾಡಲಾಗಿದೆ. ಸಮೀಕ್ಷೆಯಲ್ಲಿರುವ ಲೋಪವನ್ನು ಸರಿಪಡಿಸಬೇಕು

ಸತೀಶ್, ಸ್ಥಳೀಯರು,

ಹಳೇಬೀಡು

ಸಾರ್ವಜನಿಕ ಮೂಲ ಸೌಕರ್ಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯರಸ್ತೆ ವಿಸ್ತರಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ಪಟ್ಟಣದ ಸೌಂದರ್ಯ ಇಮ್ಮಡಿಯಾಗುವುದಲ್ಲದೆ, ಜನರಿಗೆ ಅನುಕೂಲವೂ ಆಗುತ್ತದೆ. ಕಾಮಗಾರಿಯನ್ನು ಚುರುಕುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗಳಿಗೆ ಸೂಚಿಸುತ್ತೇನೆ

ಎಚ್.ಕೆ.ಸುರೇಶ್

ಶಾಸಕ, ಬೇಲೂರು ವಿಧಾನಸಭಾ ಕ್ಷೇತ್ರ