ಜಿಲ್ಲೆ

ಆಮೆಗತಿಯಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ, ಜನ, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಬೇಸರ

ವಿಜಯಪುರ: ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ತಿಂಗಳಿನಿಂದ ರಸ್ತೆ ಬದಿಯಲ್ಲಿ ಪುರಸಭೆಯಿಂದ ಕುಡಿಯುವ ನೀರಿನ ಕೊಳವೆಮಾರ್ಗ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ನಾಲ್ಕಾರು ದಿನಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ನಾನಾ ಕಾರಣಗಳಿಂದಾಗಿ ವಿಳಂಬವಾಗುತ್ತಿದ್ದು, ಜನ, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.

ಪೈಪ್‌ಲೈನ್ ಅಳವಡಿಕೆಗೆ ರಸ್ತೆ ಅಗೆಯಲಾಗಿದೆ. ಪೈಪ್ ಅಳವಡಿಕೆ ಬಳಿಕ ಸಮರ್ಪಕವಾಗಿ ಮುಚ್ಚಲಾಗಿಲ್ಲ. ಇದರಿಂದಾಗಿ ರಸ್ತೆಯ ತುಂಬೆಲ್ಲ ಹಳ್ಳ, ದಿಣ್ಣೆಗಳು ಉಂಟಾಗಿದೆ. ಈ ರಸ್ತೆಯಲ್ಲಿ ಸುಗಮ ಸಂಚಾರ ದುಸ್ತರವಾಗಿರುವ ಕಾರಣ ಚಿಕ್ಕಬಳ್ಳಾಪುರ ರಸ್ತೆಗೆ ಬರಲು ಜನರು ಸುತ್ತುಬಳಸಿಕೊಂಡು ಬರುವ ಸ್ಥಿತಿ ನಿರ್ಮಾಣವಾಗಿದೆ.

ಬೆಸ್ಕಾಂ ಕಚೇರಿ ಮುಂಭಾಗ, ಶಿಡ್ಲಘಟ್ಟ ಡೀವಿಯೇಷನ್ ರಸ್ತೆಗೆ ಹಾಗೂ ವಿಜಯಾ ಶಿಕ್ಷಣ ಸಂಸ್ಥೆಗಳು ಮತ್ತು ಎವರ್ ಗ್ರೀನ್ ಶಾಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಕಾಮಗಾರಿ ಅರೆಬರೆ ಆಗಿರುವ ಕಾರಣ ವಿದ್ಯಾರ್ಥಿಗಳಿಗೆ ಕೂಡ ಶಾಲೆ, ಕಾಲೇಜಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ, ರಸ್ತೆ ದುರಸ್ತಿಗೊಳಿಸಲು ನಿರ್ಲಕ್ಷ್ಯ ತೋರುತ್ತಿರುವ ಪುರಸಭೆ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಪಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ಮಕ್ಕಳಿಗೆ ತೊಂದರೆ: ಕಳೆದೆರಡು ದಿನಗಳಿಂದ ಜಡಿ ಮಳೆ ಆಗುತ್ತಿದೆ. ಅಗೆದಿರುವ ರಸ್ತೆ ಕೆಸರುಗದ್ದೆಯಂತಾಗಿದೆ. ಎಷ್ಟೇ ಎಚ್ಚರಿಕೆಯಿಂದ ಓಡಾಡುತ್ತೇವೆ ಎಂದರೂ ವಿದ್ಯಾರ್ಥಿಗಳು ಬಿದ್ದು, ಗಾಯಗೊಳ್ಳುವುದು ಸಾಮಾನ್ಯವಾಗಿದೆ. ವಾಹನಗಳು ಕೂಡ ಸ್ಕಿಡ್ ಆಗಿ, ಬೀಳುವ ಸವಾರರು ಗಾಯಗೊಳ್ಳುತ್ತಿದ್ದಾರೆ.

ಕೊಳವೆಮಾರ್ಗ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಜನರಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಬೆಸ್ಕಾಂ ಕಚೇರಿ ಮುಂಭಾಗದ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಸಿ, ಜನ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮುಖ್ಯರಸ್ಥೆಗೆ ಹೊಂದಿಕೊಂಡಿರುವ ಸಂಪರ್ಕ ರಸ್ತೆಗಳಲ್ಲಿ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಎ.ಬಿ. ಪ್ರದೀಪ್‌ಕುಮಾರ್ ಪುರಸಭೆ ಮುಖ್ಯಾಧಿಕಾರಿ