ಜಿಲ್ಲೆ

ಆಮೆಗತಿ ಕಾಮಗಾರಿಗೆ ಆಕ್ರೋಶ: ಕೆಆರ್‌ಐಡಿಎಲ್ ಅಧಿಕಾರಿಗಳ ನಿರ್ಲಕ್ಷ್ಯ

ವಿಜಯವಾಣಿ ಸುದ್ದಿಜಾಲ ಆನೇಕಲ್
ಬೆಂಗಳೂರಿನಿಂದ ಸರ್ಜಾಪುರ-ಹೊಸಕೋಟೆಗೆ ಸಂಪರ್ಕ ಕಲ್ಪಿಸುವ ದೊಮ್ಮಸಂದ್ರ ವೃತ್ತದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಎರಡು ವರ್ಷಗಳ ಹಿಂದೆ ಕೈಗೊಂಡಿದ್ದ ಮೇಲ್ಸೆತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ವಾಹನ ಸವಾರರು ನಿತ್ಯವೂ ಧೂಳು ಹಾಗೂ ಗುಂಡಿಗಳ ನಡುವೆ ಸಂಚರಿಸುತ್ತಿರುವುದರಿಂದ ನರಕ ದರ್ಶನವಾಗುತ್ತಿದೆ.
ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರ ದೊಮ್ಮಸಂದ್ರ-ಸರ್ಜಾಪುರ ಹಾಗೂ ದೊಮ್ಮಸಂದ್ರ-ವರ್ತೂರು ಕಡೆಗೆ ಮೇಲ್ಸೆತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆದಿತ್ತು. ಸಾರ್ವಜನಿಕರು ಪದೇಪದೆ ರಸ್ತೆ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದರೂ ಕೆಆರ್‌ಐಡಿಎಲ್ ಅಧಿಕಾರಿಗಳು ನಿದ್ದೆಯಿಂದ ಏಳುತ್ತಿಲ್ಲ.
ಶಾಲಾ ಮಕ್ಕಳ ಪರದಾಟ: ದೊಮ್ಮಸಂದ್ರ ಹಾಗೂ ಸರ್ಜಾಪುರ ಸುತ್ತಮುತ್ತ ಹೆಚ್ಚು ಶಾಲೆಗಳಿದ್ದು, ಶಾಲಾ ವಾಹನಗಳು ಹಾಗೂ ವಿದ್ಯಾರ್ಥಿಗಳು
ದೊಮ್ಮಸಂದ್ರ ವೃತ್ತದಲ್ಲಿ ಪರದಾಡಬೇಕಾದ ಸ್ಥಿತಿ ಇದೆ. ಮೊದಲೇ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿದ್ದು, ಮತ್ತಷ್ಟು ಪರದಾಡುವಂತಾಗಿದೆ.
ಮೇಲ್ಸೆತುವೆ ನಿರ್ಮಾಣ ಹೆಸರಿನಲ್ಲಿರುವ ರಸ್ತೆಯನ್ನೂ ಕಿತ್ತು ಮಕ್ಕಳ ಆರೋಗ್ಯ ಸ್ಥಿತಿ ಹದಗೆಡುವಂತೆ ಮಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ವ್ಯಾಪಾರಕ್ಕೆ ಅಡಚಣೆ: ಸರ್ಜಾಪುರ-ಬೆಂಗಳೂರು ಮುಖ್ಯರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನದಟ್ಟಣೆ ಹೆಚ್ಚುತ್ತಿದ್ದು, ್ಲೈ ಓವರ್ ನಿರ್ಮಿಸಲು ಹಾಕಿದ್ದ ಕಬ್ಬಿಣಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಮುಂದಿನ ದಿನಗಳಲ್ಲಿ ಮೇಲ್ಸೇತುವೆ ಬಳಕೆ ಬಗ್ಗೆ ಸಂಶಯ ಮೂಡುತ್ತಿದೆ. ಅಕ್ಕಪಕ್ಕದ ನಿವಾಸಿಗಳು ಹಾಗೂ ಅಂಗಡಿ, ಹೋಟೆಲ್ ಮಾಲೀಕರು ಧೂಳಿನಿಂದ ವ್ಯಾಪಾರ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ್ಲೈ ಓವರ್ ನಿರ್ಮಾಣ ಮಾಡುವುದಕ್ಕೂ ಮುನ್ನ ರಸ್ತೆ ಕಿತು ್ತಹಾಕಿ ಹೊಸ ರಸ್ತೆ ಮಾಡುತ್ತೇವೆ ಎಂದು ಹೊರಟ ಕೆಆರ್‌ಐಡಿಎಲ್ ಅಧಿಕಾರಿಗಳ ಕೆಲಸಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಧ್ಯೆ ಪ್ರವೇಶಿಸಿ ಕಾಮಗಾರಿಗೆ ವೇಗ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಎರಡೂವರೆ ವರ್ಷದಿಂದ ಸ್ಥಳೀಯರು ಧೂಳು ಹಾಗೂ ಗುಂಡಿಗಳ ನಡುವೆ ಸಂಚರಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಹಲವು ಬಾರಿ ಮನವಿ ಮಾಡಿದರೂ ಉಡಾಫೆ ಉತ್ತರ ನೀಡುತ್ತಿದ್ದಾರೆ. ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿ ಸಮಸ್ಯೆ ಬಗೆಹರಿಸಬೇಕು.
ಶ್ರೀನಿವಾಸರೆಡ್ಡಿ ಸ್ಥಳೀಯ ನಿವಾಸಿ’

ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಪ್ರತಿ ದಿನ ಪಂಚಾಯಿತಿ ಬಳಿ ಜನ ಬಂದು ರಸ್ತೆ ಮಾಡಲು ಹೇಳುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದೇವೆ. ಈ ಬಗ್ಗೆ ಕೆಆರ್‌ಐಡಿಎಲ್ ಅಧಿಕಾರಿಗಳಿಗೆ ಹಲವು ಬಾರಿ ಸೂಚಿಸಿದ್ದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಪವಿತ್ರಾ ಜಯಪ್ರಕಾಶ್ ಅಧ್ಯಕ್ಷೆ, ಯಮರೆ ಗ್ರಾಪಂ