ಜಿಲ್ಲೆ

ಆಮೆ ವೇಗದಲ್ಲಿ ಹೆದ್ದಾರಿ ಪ್ರಗತಿ, ನೆಲಮಂಗಲ-ದೇವನಹಳ್ಳಿ ಹೈವೇಯಲ್ಲಿ ಹೈರಾಣ, ವಾಹನ ಸಂಚಾರ ದುಸ್ತರ

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ

ನೆಲಮಂಗಲದಿಂದ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ನಾಲ್ಕೈದು ವರ್ಷದಿಂದ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಹೈರಾಣಾಗಿದ್ದಾರೆ.

2021ರ ಅಕ್ಟೋಬರ್ ವೇಳೆಗೆ ರಸ್ತೆ ಕಾಮಗಾರಿ ಮುಗಿಯಬೇಕಿದ್ದರೂ ಇದುವರೆಗೆ ಶೇ.60 ಪ್ರಗತಿ ಕಂಡಿದ್ದು, ಇನ್ನೆರಡು ವರ್ಷವಾದರೂ ರಸ್ತೆ ಕಾಮಗಾರಿ ಮುಗಿಯುವ ಲಕ್ಷಣ ಕಂಡುಬರುತ್ತಿಲ್ಲ. ಕರೊನಾ ಲಾಕ್‌ಡೌನ್, ಬಿಲ್ ಪಾವತಿ ನಿಧಾನ ಮತ್ತಿತರ ಕಾರಣ ಹೇಳುತ್ತಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಅಧಿಕಾರಿಗಳು ಕಾಮಗಾರಿ ವೇಗ ಹೆಚ್ಚಿಸುವ ಕಡೆ ಗಮನ ನೀಡುತ್ತಿಲ್ಲ. ಪರಿಣಾಮವಾಗಿ ಹೆದ್ದಾರಿ ಸ್ಥಳೀಯರ ಪಾಲಿಗೆ ಯಮಸದೃಶವಾಗಿದೆ, ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಪಾಲಿಗೆ ಈ ಹೆದ್ದಾರಿ ಬಲಿ ಕೂಪವಾಗಿದೆ.

ಜನರಿಂದ ಹಿಡಿಶಾಪ: ನೆಲಮಂಗಲದಿಂದ ದೇವನಹಳ್ಳಿ ವಿಮಾನ ನಿಲ್ದಾಣ, ಮಧುರೆ ಕಡೆಯಿಂದ ದೊಡ್ಡಬಳ್ಳಾಪುರ, ಕೋಲಾರ-ತುಮಕೂರಿಗೂ ಸಂಪರ್ಕ ಕಲ್ಪಿಸುವ ದ್ವಿಮುಖ ಸಂಚಾರ ಹೆದ್ದಾರಿ ಕಾಮಗಾರಿ ಕೈಗೊಳ್ಳಲಾಗಿದೆ. ಆರಂಭದಲ್ಲಿ ಈ ಭಾಗದ ವಾಹನ ಸಂಚಾರಕ್ಕೆ ಕಡೆಗೂ ಶುಕ್ರದೆಸೆ ಆರಂಭವಾಯಿತು ಎಂದೇ ಜನ ಭಾವಿಸಿದ್ದರು. ಆದರೆ ಕಾಮಗಾರಿಯ ಆಮೆಗತಿಯ ವೇಗದಿಂದ ಪ್ರತಿನಿತ್ಯ ಜನ ರಸ್ತೆ ಅವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ.

ಅಲ್ಲಲ್ಲಿ ಜಲ್ಲಿ, ಮಣ್ಣು: ಸುಮಾರು 40 ಕಿಮೀ ಉದ್ದದ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಜಲ್ಲಿ ಸುರಿಯಲಾಗಿದೆ, ಮತ್ತೆ ಕೆಲವು ಕಡೆಗಳಲ್ಲಿ ಮಣ್ಣು ಸುರಿಯಲಾಗಿದೆ, ಹಲವೆಡೆ ಜಲ್ಲಿ ಧೂಳು ಸುರಿಯಲಾಗಿದೆ, ಪ್ರತಿನಿತ್ಯ ಕಾಮಗಾರಿ ನಡೆಯುತ್ತಲೇ ಇದೆ ಎಂಬಂತೆ ಗೋಚರಿಸಿದರೂ ಕಾಮಗಾರಿಯ ವೇಗಪಡೆದುಕೊಂಡಿಲ್ಲ. ಹಲವು ಭಾಗಗಳಲ್ಲಿ ಅರ್ಧಂರ್ಬಂಧ ರಸ್ತೆ ಅಗೆದು ಹಾಗೆ ಬಿಟ್ಟಿದ್ದು, ದ್ವಿಚಕ್ರ ವಾಹನ ಸವಾರರು ಪ್ರಾಣ ಮುಷ್ಟಿಯಲ್ಲಿ ಹಿಡಿದುಕೊಂಡೇ ಸಾಗಬೇಕಿದೆ. ಅದರಲ್ಲೂ ಮುಂಜಾನೆ ಹಾಗೂ ರಾತ್ರಿ ವೇಳೆ ಈ ರಸ್ತೆ ಸಂಚಾರ ಬಹಳ ಅಪಾಯಕಾರಿಯಾಗಿ ಪರಿಣಮಿಸಿದೆ.

ಹಾಲು ಪೇಪರ್ ಹಾಕಲು ಸಂಕಷ್ಟ: ಈ ರಸ್ತೆಯುದ್ದಕ್ಕೂ ನೂರಾರು ಗ್ರಾಮಗಳು, ಹೋಬಳಿ ಕೇಂದ್ರಗಳು ಸಿಗುತ್ತವೆ. ಈ ಭಾಗದಲ್ಲಿ ಮುಂಜಾನೆ ವೇಳೆ ಹಾಲು ಪೇಪರ್ ವಿತರಿಸುವ ಕೆಲಸಗಾರರಿಗೆ ಈ ರಸ್ತೆಯಲ್ಲಿ ಸಾಗುವುದು ಕಷ್ಟಸಾಧ್ಯವಾಗಿದೆ, ಗುಂಡಿಹೊಂಡಗಳನ್ನು ತಪ್ಪಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವುದು ಸವಾಲಿನ ಕೆಲಸವಾಗಿದೆ, ಹಾಲು ಪೇಪರ್ ವಿತರಿಸುವ ಹುಡುಗರು ವಾಹನಗಳಿಂದ ಬಿದ್ದು ಗಾಯಗೊಂಡಿರುವ ಪ್ರಕರಣಗಳು ಸಾಕಷ್ಟಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಧೂಳಿನ ಮಜ್ಜನ: ರಸ್ತೆ ಕಾಮಗಾರಿಯುದ್ದಕ್ಕೂ ಎಂ ಸ್ಯಾಂಡ್ ಸುರಿದಿರುವ ಪರಿಣಾಮ ಧೂಳುಮಯವಾಗಿದೆ, ಲಾರಿಗಳು, ಟ್ರಕ್, ಬಸ್ ಸಂಚರಿಸುವ ರಸ್ತೆಯಲ್ಲಿ ಸಣ್ಣಪುಟ್ಟ ವಾಹನ ಸಂಚಾರ ನಡೆಸುವುದು ದುಸ್ತರವಾಗಿದೆ. ನಾಲ್ಕೈದು ವರ್ಷದಿಂದ ವಾಹನ ಸವಾರರು ಧೂಳಿನ ಮಜ್ಜನ ಅನುಭವಿಸುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಕಾಮಗಾರಿ ಮುಗಿಸಲು ನೀಡಿರುವ ಗುರಿ ಅವಧಿ ಮುಗಿದಿದ್ದರೂ ಕಾಮಗಾರಿ ಪೂರ್ಣಗೊಳ್ಳದಿರಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಥಳೀಯ ಆರೋಪವಾಗಿದೆ. ಈ ಬಗ್ಗೆ ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಕೆಆರ್‌ಡಿಸಿಎಲ್ ಇಂಜಿನಿಯರ್‌ಗಳನ್ನು ವಿಚಾರಿಸಿದರೆ ಹಾರಿಕೆೆ ಉತ್ತರ ಕೊಡುತ್ತಾರೆ ಎಂಬುದು ಸ್ಥಳೀಯರ ದೂರಾಗಿದೆ.

ಈ ರಸ್ತೆಯಲ್ಲಿ ಸಾಗುವುದೆಂದರೆ ಸಾವಿನೊಂದಿಗೆ ಸರಸವಾಡಿದಂತೆಯೇ ಸರಿ, ಕೆಲ ವರ್ಷದಿಂದ ರಸ್ತೆ ಅಭಿವೃದ್ಧಿ ಪ್ರಗತಿ ಮುಂದಕ್ಕೆ ಸಾಗುತ್ತಿಲ್ಲ, ದ್ವಿಚಕ್ರವಾಹನದಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ, ಧೂಳು ಗುಂಡಿಬಿದ್ದ ಅರೆಬರೆ ರಸ್ತೆಯಲ್ಲಿ ಸಂಚರಿಸಲು ಪ್ರತಿನಿತ್ಯ ಸರ್ಕಸ್ ಮಾಡಬೇಕಿದೆ. ಹನುಮಂತರಾಜು ಚೋಳಮಾರನಹಳ್ಳಿ ಕಾಮಗಾರಿಗೆ ಬಿಲ್ ಪಾವತಿ ತಡವಾದ್ದರಿಂದ ಕೆಲ ದಿನಗಳ ಹಿಂದೆ ಕಾಮಗಾರಿ ವೇಗ ತಗ್ಗಿತ್ತು. ಈಗ ಮತ್ತೆ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಜಲ್ಲಿ, ಮರಳು ಕೊರತೆಯಿಂದಲೂ ಕಾಮಗಾರಿ ತಡವಾಗಿದೆ. ಕಾಮಗಾರಿ ಮುಗಿಸಲು ಅವಧಿ ವಿಸ್ತರಿಸಲಾಗಿದ್ದು, ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಸುನೀಲ್‌ಶೆಟ್ಟಿ ಗುತ್ತಿಗೆದಾರ