ಜಿಲ್ಲೆ

ಆಮೂರರ ಕಾರ್ಯಗಳು ಬರಹಗಾರರಿಗೆ ಪ್ರೇರಣೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿಮರ್ಶಕ ಜಿ.ಎಸ್​.ಆಮೂರ ಅವರು ಬರವಣಿಗೆಯ ಬದುಕಿನಲ್ಲಿ ತಪಸ್ಸಿನಂತೆ ಸಾಗಿದರು. ಅವರ ಕಾರ್ಯಗಳು ಬರಹಗಾರರಿಗೆ ಪ್ರೇರಕ ಶಕ್ತಿ ಎಂದು ವಿಮರ್ಶಕ ಎಚ್​.ಎಸ್​. ರಾಘವೇಂದ್ರರಾವ್​ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ ಭವನದಲ್ಲಿ ಡಾ. ಜಿ.ಎಸ್​. ಆಮೂರ ಜನ್ಮಶತಮಾನೋತ್ಸವ ಸಮಿತಿ ಹಾಗೂ ಜಿ.ಬಿ. ಜೋಶಿ ಮೆಮೋರಿಯಲ್​ ಟ್ರಸ್ಟ್​ ವತಿಯಿಂದ ಭಾನುವಾರ ಆಯೋಜಿಸಿದ್ದ ಡಾ. ಜಿ.ಎಸ್​. ಆಮೂರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಳಗನ್ನಡ, ನಡುಗನ್ನಡ ಓದುವ ಅವಶ್ಯಕತೆ ಇಲ್ಲ ಎಂಬ ಪ್ರಶ್ನೆಗಳು ನವ್ಯ ಸಾಹಿತ್ಯದ ಆರಂಭದಲ್ಲಿ ಉದ್ಭವಿಸಿದ್ದವು. ನವ್ಯ ಮತ್ತು ನವೋದಯದ ಕಾರಣಗಳನ್ನು ಒಟ್ಟಾಗಿ ಅವಲೋಕಿಸಿದಾಗ ಯಾವ ಕಾಲಗಳು ಯಾವುದನ್ನು ಒಳಗೊಂಡವು, ಯಾವುದನ್ನು ಕೈ ಬಿಟ್ಟವು ಎಂಬುದು ಮುಖ್ಯವಾಗುತ್ತದೆ. ಕೈ ಬಿಟ್ಟ ಕಾಲದಲ್ಲಿ ಆಮೂರ ಅವರು ಬರೆಯವುದನ್ನು ಶುರು ಮಾಡಿ, ಅದನ್ನು ಮೀರುವ ಪ್ರಯತ್ನ ಮಾಡಿದರು ಎಂದರು.

ಆಮೂರರ ಬರವಣಿಗೆಯನ್ನು ಎರಡು (ಕನ್ನಡ ಮತ್ತು ಆಂಗ್ಲ) ಪರ್ವಗಳಲ್ಲಿ ಕಾಣಬಹುದು. ಅವರ 57ನೇ ವರ್ಷದವರೆಗೆ ಆಂಗ್ಲ ಪರ್ವದಲ್ಲಿ ತೊಡಗಿಕೊಂಡಿದ್ದರು. ನಂತರ ಕನ್ನಡ ಪರ್ವದಲ್ಲಿ ತೊಡಗಿದರು. ಅವರು ಕುವೆಂಪು, ಬೇಂದ್ರೆ, ಯು.ಆರ್​.ಅನಂತಮೂರ್ತಿ ಅವೆರೆಲ್ಲರ ಕುರಿತು ಸಮಗ್ರ ಅಧ್ಯಯನ ಪುಸ್ತಕಗಳನ್ನು ರಚಿಸಿದ್ದಾರೆ. ಒಂದು ಕತೆ, ಕವಿತೆ, ನಾಟಕದ ಬಗ್ಗೆ ಪ್ರಾಯೋಗಿಕ ವಿಮರ್ಶೆಯನ್ನು ಬರೆದಿದ್ದಾರೆ ಎಂದರು.

ಒಳಗಿರುವ ಬೆಳಕು ಕೃತಿ ಕುರಿತು ಡಾ. ಜಿ.ಎಂ. ಹೆಗಡೆ ಮಾತನಾಡಿ, ಡಾ. ಜಿ.ಎಸ್​. ಆಮೂರ ಅವರು ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಸಮೃದ್ಧ ವಿಮರ್ಶಾ ಸಾಹಿತ್ಯ ಪರಂಪರೆ ನಿರ್ಮಾಣ ಮಾಡಿದ ವಿದ್ವತ್ತಿನ ಶಿಖಿರವಾಗಿದ್ದರು. ಈ ಪುಸ್ತಕದಲ್ಲಿ ಬೇಂದ್ರೆ ವಿಮರ್ಶೆಯ, ಅವರ ಓದಿನ ಆಳವಾದ ಜ್ಞಾನದ ಬೇರೆ ಬೇರೆ ಮುಖಗಳನ್ನು ಕಾಣುತ್ತೇವೆ. ಬೇಂದ್ರೆ ಕಾವ್ಯದ ಮುಖಗಳು, ಬೇಂದ್ರೆ ಜೀವನ, ಬೇಂದ್ರೆ ಕಾವ್ಯ ಧರ್ಮ, ಬೇಂದ್ರೆ ಅವರ ಕವ್ಯಾನುಸಂಧಾನ ಸೇರಿ ಇನ್ನೂ ಅನೇಕ ವಿಷಯಗಳನ್ನು ಈ ಕೃತಿ ಒಳಗೊಂಡಿದೆ ಎಂದರು.

ಪ್ರೊ. ಮಲ್ಲಿಕಾರ್ಜುನ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಂ. ಹೆಗಡೆ ಸಂಪಾದಕತ್ವದ ಒಳಗಿರುವ ಬೆಳಕು ಕೃತಿಯನ್ನು ಡಾ. ರಮಾಕಾಂತ ಜೋಶಿ ಬಿಡುಗಡೆ ಮಾಡಿದರು. ಎಂ.ಎ. ಸುಬ್ರಹ್ಮಣ್ಯ, ಸಮೀರ ಜೋಶಿ, ಡಾ. ವೀಣಾ ಶಾಂತೇಶ್ವರ, ಡಾ. ಶ್ಯಾಮ ಆಮೂರ, ಆಮೂರ ಕುಟುಂಬಸ್ಥರು, ಇತರರು ಇದ್ದರು.

ರಾಘವೇಂದ್ರ ಪಾಟೀಲ ಸ್ವಾಗತಿಸಿದರು. ಡಾ. ಹ.ವೆಂ. ಕಾಖಂಡಕಿ ನಿರೂಪಿಸಿದರು. ನಂತರ ನಡೆದ ಗೋಷ್ಠಿಯಲ್ಲಿ ಜಿ.ಎಸ್​. ಆಮೂರ ಸೃಜನಶೀಲ ಬರಹಗಳು ಕುರಿತು ಎಸ್​.ಆರ್​. ವಿಜಯಶಂಕರ, ಸಂವಾದದಲ್ಲಿ ವಿಮರ್ಶಕ ರಾಜೇಂದ್ರ ಚೆನ್ನಿ, ಎಂ.ಎಸ್​. ಆಶಾದೇವಿ, ಎಂ.ಜಿ. ಹೆಗಡೆ ಭಾಗವಹಿಸಿ ಆಮೂರರ ಸಾಹಿತ್ಯ ವಿಮರ್ಶ ಕುರಿತು ಚರ್ಚಿಸಿದರು. ಶ್ರೀಧರ ಹೆಗಡೆ ಭದ್ರನ್​ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಡಾ. ಶ್ರೀರಾಮ ಭಟ್ಟ ಸಮಾರೋಪ ನುಡಿಗಳನ್ನಾಡಿದರು.