ನಾಗಮಂಗಲ: ತಮ್ಮ ಮತವನ್ನು ಯಾವುದೇ ಆಮಿಷಗಳಿಗೆ ಮಾರಾಟ ಮಾಡಿಕೊಳ್ಳದೆ ಸಧೃಡ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದು ತಾಲೂಕು ಪಂಚಾಯಿತಿ ಇಒ ಚಂದ್ರಮೌಳಿ ಹೇಳಿದರು.
ತಾಲೂಕಿನ ಚಿಣ್ಯ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಮತದಾರರ ದಿನಾಚರಣೆ ಹಾಗೂ ಮತದಾನ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮತದಾನದಿಂದ ಯಾರೊಬ್ಬರೂ ಹಿಂದುಳಿಯಬಾರದು. ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮತದಾನದಿಂದ ಭವ್ಯ ಭಾರತ ನಿರ್ಮಿಸಲು ಸಹಕಾರಿಯಾಗಲಿದೆ. ಸಂವಿಧಾನದಲ್ಲಿ ಮತದಾನಕ್ಕೆ ವಿಶೇಷ ಆದ್ಯತೆ ನೀಡಿದ್ದು, ಪ್ರಜೆಗಳಿಗೆ ನೀಡಿರುವ ವಿಶೇಷ ಹಕ್ಕಾಗಿದೆ. ಮತ ಚಲಾಯಿಸುವುದರಿಂದ ಸಂವಿಧಾನವನ್ನು ಗೌರವಿಸುವಂತಾಗುತ್ತದೆ. ಚುನಾವಣೆಯ ಸಂದರ್ಭ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ವತಿಯಿಂದ ಮತದಾರರಿಗೆ ಹಣ, ಆಮಿಷಗಳನ್ನು ನೀಡುವುದು ಕಾನೂನು ಬಾಹಿರವಾಗಿದ್ದು , ಅಂತಹ ಘಟನೆಗಳು ನಿಮ್ಮ ಸುತ್ತ ಮುತ್ತಲಿನಲ್ಲಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಮತ ಚಲಾಯಿಸಲು ನಿರುತ್ಸಾಹ ತೋರುವಂತಹ ಮತದಾರರಿದ್ದರೆ ಅವರ ಮನವೊಲಿಸುವ ಮೂಲಕ ಮತ ಹಾಕಿಸಿ. ವಯೋವೃದ್ಧರು, ಅಂಗವಿಕಲರಿಗೆ ಈ ಬಾರಿ ಚುನಾವಣಾ ಆಯೋಗ ವಿಶೇಷ ಪ್ರಾಮುಖ್ಯತೆ ನೀಡಿದ್ದು, ಮನೆಯಲ್ಲಿ ಕುಳಿತೇ ಮತಚಲಾಯಿಸಬಹುದಾಗಿದೆ. ಅಂತವರಿದ್ದರೆ ನಿಗದಿತ ಅರ್ಜಿಯೊಂದಿಗೆ ಮನವಿ ಸಲ್ಲಿಸಿದರೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ನರೇಗಾ ಯೋಜನೆ ಸಹಾಯಕ ನಿರ್ದೇಶಕಿ ಮೇನಕಾದೇವಿ, ಪಿಡಿಒ ರೂಪಶ್ರೀ ಇದ್ದರು.